ಸಹಕಾರ-ಸರಕಾರ- ಮತ್ತು ರಾಜಕೀಯ ಅಧಿಕಾರ
ಭಾರತ ಸರಕಾರ "ಸಹಕಾರ ಸಚಿವಾಲಯ" ಆರಂಭಿಸಿ ಅದರ ಚುಕ್ಕಾಣಿಯನ್ನು ಗೃಹ ಸಚಿವ ಅಮಿತ್ ಷಾ ಅವರ ಕೈಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ರಂಗದ ಮುಂದಿನ ಬೆಳವಣಿಗೆ ಹಾಗೂ ಷಾ ಅವರ ಭವಿಷ್ಯದ ನಡೆ ಏನಿರಬಹುದು ಎನ್ನುವ ಕುತೂಹಲ ಈಗಾಗಲೇ ಚರ್ಚೆಯ ಮೂಲಕ ವ್ಯಕ್ತವಾಗುತ್ತಿದೆ. ಕೋವಿಡ್ ನಂತರದಲ್ಲಿ ಹದಗೆಟ್ಟ ದೇಶದ ರಾಜಕೀಯ, ಆರ್ಥಿಕ, ಪರಿಸ್ಥಿತಿಯ ಸಂದರ್ಭದಲ್ಲಿ ಸಹಕಾರೀ ರಂಗಕ್ಕೆ ದೊರೆತಿರುವ ಮಹತ್ವ ಅರ್ಥವ್ಯವಸ್ಥೆಯ ಪುನರುತ್ಥಾನಕ್ಕೆ ಹೊಸ ಅವಕಾಶಗಳನ್ನೇನಾದರೂ ಹುಟ್ಟು ಹಾಕಿದಯೇ ಎನ್ನುವ ಕುರಿತು ಈ ಲೇಖನದ ಮೊದಲ ಬಾಗದಲ್ಲಿ, ರಾಜಕೀಯದಲ್ಲಿ ಪ್ರತಿ ಹೆಜ್ಜೆಯನ್ನೂ ಅಳೆದು ತೂಗಿ ಬಹಳ ಲೆಕ್ಕಾಚಾರದಲ್ಲಿ ಇಡುವ ಅಮಿತ್ ಷಾ ಸಹಕಾರೀ ಸಚಿವಾಲಯದ ಹೊಣೆಯನ್ನು ವಹಿಸಿಕೊಂಡಿರುವುದರ ಹಿಂದೆಯೂ ಕೆಲವೊಂದು ಕಾರಣಗಳು ಇದ್ದೇ ಇದೆ. ಅಂತಹ ಕಾರಣಗಳು ಯಾವುದು, ಅವುಗಳ ಹಿಂದು ಮುಂದಿನ ಲೆಕ್ಕಾಚಾರಗಳೇನು ಎನ್ನುವ ಕುರಿತು ಎರಡನೇ ಬಾಗದಲ್ಲಿ ಚರ್ಚಿಸಲಾಗಿದೆ.
ಸಹಕಾರಿ ರಂಗ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಹಳ ಮಹತ್ವದ ರಂಗವಾಗಿ ಬೆಳೆಯುತ್ತಿದೆ ಎನುವುದನ್ನು ನಮ್ಮ ಮುಂದಿರುವ ಅಂಕಿ ಅಂಶಗಳೇ ಹೇಳುತ್ತಿವೆ. ದೇಶಾತ್ಯಂತ 95238 ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು, 363 ಜಿಲ್ಲಾ ಸಹಕಾರಿ ಬ್ಯಾಂಕುಗಳು, ಒಂದು ಕೋಟಿ ಎಪ್ಪತ್ತು ಲಕ್ಷ ಸದಸ್ಯರಿರುವ 1,94,195 ಹಾಲು ಉತ್ಪಾದಕರ ಸಹಕಾರಿ ಸಂಘಗಳು, ದೇಶದ ಒಟ್ಟು ಸಕ್ಕರೆ ಉತ್ಪಾದನೆಯ ಶೇಕಡಾ 35% ರಷ್ಟನ್ನು ಪೂರೈಸುವ 330 ಸಹಕಾರಿ ಸಕ್ಕರೆ ಕಾರ್ಖಾನೆಗಳು, ರೂ.6104 ಕೋಟಿ ಬಂಡವಾಳ, ಮತ್ತು 1,35,393 ಕೋಟಿಯಷ್ಟು ಠೇವಣಿ ಹೊಂದಿರುವ ರಾಜ್ಯ ಸಹಕಾರಿ ಬ್ಯಾಂಕುಗಳು, ರೂ.21447 ಕೋಟಿ ಬಂಡವಾಳ ರೂ.3,78,248 ಕೋಟಿಯಷ್ಟು ಠೇವಣಿ ಸಂಗ್ರಹಿಸಿರುವ, ಹಾಗೂ ರೂ 300034 ಕೋಟಿ ಅಲ್ಪಾವಧಿ ಸಾಲ ನೀಡಿರುವ ಜಿಲ್ಲಾ ಸಹಕಾರಿ ಬ್ಯಾಂಕುಗಳು ಇರುವ ದೇಶ ನಮ್ಮದು. ಅಲ್ಲದೇ, ಆಹಾರ ಸಂಸ್ಕರಣೆ, ಬಟ್ಟೆ ಗಿರಣಿಗಳಿಗೆ ಸುಮಾರು ರೂ.1,48,625 ಕೋಟಿಯಷ್ಟು ಧೀರ್ಘಾವಧಿ ಸಾಲ ನೀಡಿವೆ. ಇವುಗಳಲ್ಲದೆ ದೇಶದಲ್ಲಿ 1539 ಪಟ್ಟಣ ಸಹಕಾರಿ ಬ್ಯಾಂಕುಗಳಿದ್ದು ರೂ.14,933.54 ಕೋಟಿ ಬಂಡವಾಳ ಹೊಂದಿದ್ದು ರೂ.3,05,368.27 ಕೋಟಿಯಷ್ಟು ಸಾಲ ನೀಡಿದೆ. (ಆಧಾರ: ನಬಾರ್ಡ್ ವಾರ್ಷಿಕ ವರದಿ 2019-20). ಇವಿಷ್ಟಲ್ಲದೇ, ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಕೃಷಿ ಮತ್ತು ನಗರದಲ್ಲಿ ಉದ್ಯಮಾವಕಾಶ ಸೃಷ್ಟಿಯೋ ಮುಂತಾದ ಅಂಶಗಳನ್ನು ಗಮನಿಸಿದರೆ ದೇಶದ ಅರ್ಥವ್ಯವಸ್ಥೆಯಲ್ಲಿ ಸಹಕಾರಿ ರಂಗದ ಮಹತ್ವ ಸ್ಪಷ್ಟವಾಗಿ ತಿಳಿದು ಬರುತ್ತದೆ. ಹಳ್ಳಿಯಿಂದ ದಿಲ್ಲಿಯವರೆಗೆ ದೇಶದ ಆರ್ಥಿಕ ರಾಜಕೀಯ ವ್ಯವಸ್ಥೆಯ ಹೊಕ್ಕುಳ ಬಳ್ಳಿಯೊಂದಿಗೆ ಸಂಬಂಧವಿರಿಸಿಕೊಂಡ ಈ ಸಾಂಸ್ಥಿಕ ವ್ಯವಸ್ಥೆಯ ಮಹತ್ವವನ್ನು ಮನಗಂಡು ದುಡಿಸಿಕೊಳ್ಳಲು ಯಾವುದೇ ಸರಕಾರ ಮುಂದಾದರೂ ಅದು ಖಂಡಿತವಾಗಿಯೂ ಸ್ವಾಗತಾರ್ಹ ಕ್ರಮ.
1904ರಿಂದ ಆರಂಭಿಸಿ 2005ರಲ್ಲಿ ವೈದ್ಯನಾಥನ್ ಸಮಿತಿಯ ಶಿಫಾರಸು ಸೇರಿದಂತೆ ಕಾಲದಿಂದ ಕಾಲಕ್ಕೆ ಸಹಕಾರಿ ರಂಗದ ಬಲವರ್ಧನೆಗೆ ಹಲವಾರು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. 1990ರ ದಶಕದ ನಂತರದಲ್ಲಿ ದೇಶದ ಆರ್ಥಿಕ ವಿನ್ಯಾಸದಲ್ಲಿ ಹಲವಾರು ಸ್ವರೂಪಾತ್ಮಕ ಬದಲಾವಣೆಗಳು ಆಗಿವೆ, ಆಗುತ್ತಲಿವೆ, ಮುಂದೆಯೂ ಆಗಲಿವೆ ಎನ್ನುವುದನ್ನು ಒಪ್ಪಿಕೊಂಡು ಈ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳ ಬೇಕಿದೆ. ಉದಾರೀಕರಣದ ಭಾಗವಾಗಿ ರಾಷ್ಟ್ರೀಯ ಸಹಕಾರ ನೀತಿ 2002ನ್ನು ಅರ್ಥೈಸಿಕೊಂಡರೆ ಮತ್ತು ಬಹುರಾಜ್ಯ ಸಹಕಾರಿ ಸಂಘಗಳ ಶಾಸನ ಜಾರಿಗೆ ಬಂದು ಅಂತರರಾಜ್ಯ ಸಹಕಾರೀ ಸಂಸ್ಥೆಗಳು ಕಾರ್ಯಾರಂಭ ಮಾಡಿದ ನಂತರ "ಸಹಕಾg"À ರಾಜ್ಯ ಪಟ್ಟಿಯಲ್ಲಿ ಇದ್ದರೂ, ರಾಷ್ಟ್ರಮಟ್ಟದ ಪಟ್ಟಿಗೆ ಪ್ರವೇಶ ಪಡೆಯಿತೆಂದೇ ಹೇಳಬಹುದು. ಹಾಗಾಗಿ ಇದು ಕೇವಲ ರಾಜ್ಯಕ್ಕೆ ಸೀಮಿತವಾದ ವಿಷಯ ಎನ್ನುವುದು ತಾರ್ಕಿಕವಾಗಿ ಮತ್ತು ತಾಂತ್ರಿಕವಾಗಿ ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಯೂ ನಮ್ಮ ಮುಂದಿದೆ.
ಸರಕಾರ ಆರ್ಥಿಕ ಅಭಿವೃದ್ಧಿಯಲ್ಲಿ ಉದ್ಯಮ ಶೀಲತೆಯ ತನ್ನ ಸ್ಥಾನದಿಂದ ಉದಾರೀಕರಣದ ನಂತರದ ದಿನಗಳಲ್ಲಿ ಹಂತ ಹಂತವಾಗಿ ಹಿಂದೆ ಸರಿದು ಖಾಸಗೀ ರಂಗ ಮತ್ತು ಸಹಕಾರೀ ರಂಗಕ್ಕೆ, ಹೆಚ್ಚಿನ ಮಹತ್ವ ನೀಡುವ ಒಂದು ಪರ್ಯಾಯ ಕ್ರಮವಾಗಿಯೂ ನಾವಿದನ್ನು ನೋಡಬಹುದು. ಸದ್ಯ ಕೃಷಿ ಸಚಿವಾಲಯದ ಒಂದು ಭಾಗವಾಗಿರುವ ಸಹಕಾರಿ ಇಲಾಖೆ ರಾಜ್ಯಗಳೊಂದಿಗೆ ಸಮರ್ರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದು ಕಷ್ಟದ ಕೆಲಸವೇ. ಪ್ರತ್ಯೇಕ ಸಚಿವಾಲಯ ಬಂದಾಗ ಅದಕ್ಕೆ ಸ್ವತಂತ್ರ ಅಸ್ತಿತ್ವ, ಪ್ರತ್ಯೇಕ ಬಜೆಟ್ ಅನುದಾನ ಮತ್ತು ಸ್ವತಂತ್ರ ಅಸ್ತಿತ್ವ ದೊರಕುತ್ತದೆ. ದೇಶದಲ್ಲಿ ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂನಂತಹ ರಾಜ್ಯಗಳಲ್ಲಿ ಆರ್ಥಿಕ ಪ್ರಗತಿಗೆ ಸಹಕಾರಿ ರಂಗದ ಕೊಡುಗೆ ದೊಡ್ಡದಿದೆ. ಅದೇ ಮಾದರಿಯಲ್ಲಿ ಉಳಿದ ರಾಜ್ಯಗಳಲ್ಲಿಯೂ ಸಹಕಾರೀ ಕ್ಷೇತ್ರವನ್ನು ಬೆಳೆಸಲು ಸಚಿವಾಲಯ ಪ್ರಯತ್ನಿಸುವ ಉದ್ದೇಶವಿದ್ದರೆ ಅದು ಸ್ವಾಗತಾರ್ಹವೇ.
ಇತ್ತೀಚಿನ ದಿನಗಳಲ್ಲಿ ಸಹಕಾರೀ ರಂಗದ ವ್ಯಾಪ್ತಿ, ಸ್ವರೂಪದಲ್ಲಿಯೂ ಹೊಸ ರೀತಿಯ ಬೆಳವಣಿಗೆUಳು ಆಗುತ್ತಿದೆ. ಉದಾಹರಣೆಗೆ ಕೇವಲ ಕೃಷಿ ಮಾತ್ರವಲ್ಲ, ಕಾರ್ಮಿಕ ಸಹಕಾರಿ ಸಂಘಗಳು, ವಸತಿ ಸಹಕಾರಿ ಸಂಘಗಳು, ಉದ್ಯೋಗ ಸೃಷ್ಟಿಯ ಉದ್ದೇಶ ಹೊಂದಿರುವ, ಕೌಶಲ್ಯ ತರಬೇತಿ ನೀಡುವ ಹೊಸ ತಳಿಯ ಸಹಕಾರಿ ಸಂಸ್ಥೆಗಳು ಅಸ್ತಿತ್ವಕ್ಕೆ ಬರುತ್ತಿದ್ದು ಅವುಗಳಿಗೆ ಉತ್ತೇಜನ ನೀಡುವುದು ಅಗತ್ಯವಾಗಿರುತ್ತದೆ. ಈ ಎಲ್ಲಾ ದೃಷ್ಟಿಯಿಂದ ಪ್ರತ್ಯೇಕ ಸಚಿವಾಲಯವಿದ್ದರೆ ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಬಹುದು ಎನ್ನುವ ಮಾತಿನಲ್ಲಿ ತಿರುಳಿಲ್ಲದಿಲ್ಲ.
ಕಳೆದ ಸಾಲಿನ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ ಸಾಮಾಜಿಕ ಷೇರು ಬಂಡವಾಳ ವಿನಿಮಯ ವ್ಯವಸ್ಥೆ ಈಗಾಗಲೇ ಪ್ರಸ್ತಾಪಿಸಿದ ಹೊಸ ತಳಿಯ ಸಹಕಾರೀ ಸಂಸ್ಥೆಗಳಿಗೆ ಅಗತ್ಯ ಸಂಪನ್ಮೂಲ ಕ್ರೋಢಿಕರಿಸಲು ಸಹಾಯ ಮಾಡಬಹುದಾಗಿದೆ. ಆದುದರಿಂದ ಸಹಕಾರೀ ಸಚಿವಾಲಯ ಈ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆ ಎಂದು ನೋಡಬಹುದು. ಕೃಷಿ ಸಚಿವಾಲಯವನ್ನು ಈಗಿರುವ ಸಹಕಾರಿ ರಂಗದ ಜವಾಬ್ದಾರಿಯಿಂದ ಮುಕ್ತಗೊಳಿಸಿ ಕೃಷಿಕ್ಷೇತ್ರದ ಉತ್ಪಾದಕತೆಗೆ ಅಗತ್ಯವಿರುವ ಹನಿ ನೀರಾವರಿ, ಹೊಸ ಬೆಳೆಗಳು, ಸುಧಾರಿತ ಸಾವಯವ ಕೃಷಿ ಪದ್ಧತಿ, ಮುಂತಾದ ಕ್ರಮಗಳ ಕಡೆಗೆ ಹೆಚ್ಚಿನ ಗಮನ ಕೊಡುವಂತೆ ಮಾಡಬಹುದು. ಕೃಷಿಕ್ಷೇತ್ರಕ್ಕೆ ಅಗತ್ಯವಿರುವ ಮಾರುಕಟ್ಟೆ, ಗೋದಾಮು, ಸಾಲ ಸೌಲಭ್ಯದಂತಹ ಅಂಶಗಳನ್ನು ಸಹಕಾರ ಸಚಿವಾಲಯ ನಿಭಾಯಿಸಿದರೆ ಕೃಷಿ ರಂಗದ ಉತ್ಪಾದಕತೆಯೂ ಉತ್ತಮವಾಗಬಹುದು. ಮಾತ್ರವಲ್ಲ ಮುಂದಿನ ದಿನಮಾನಗಳಲ್ಲಿ ಕೃಷಿ ಕಾಯಿದೆಗೆ ಹಾಗೂ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಜಾರಿಗೆ ತರಲು ಉದ್ದೇಶಿತ ಮಸೂದೆಗಳನ್ನು ಅನುಷ್ಠಾನಕ್ಕೆ ತರುವಲ್ಲಿಯೂ ಈ ಸಚಿವಾಲಯದ ಮಹತ್ವ ಇದೆ. ಯಾಕೆಂದರೆ ಸದರಿ ಕಾನೂನಿನಲ್ಲಿ ಬಹಳಷ್ಟು ವಿಷಯಗಳು ಕಾಯಿದೆಯಲ್ಲಿ ಅನುಷ್ಠಾನಗೊಳ್ಳಬೇಕಾದ ಸಂದರ್ಭದಲ್ಲಿ ಸ್ಪಷ್ಟವಾದ ನೀತಿಯಾಗಿ ನಿರೂಪಿಸಬೇಕಾದ ಹಲವು ಎಳೆಗಳಿವೆ. ಕಾಂಟ್ರಾಕ್ಟ್ ಕೃಷಿಯಂತಹ ವಿಷಯಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಆಯಾ ಪರಿಸ್ಥಿತಿಗೆ, ಸಂದರ್ಭಕ್ಕೆ ಪ್ರದೇಶಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಉದ್ಭವಿಸಬಹುದು, ಅದೆಲ್ಲವನ್ನು ನಿರ್ವಹಿಸುವ ಮತ್ತು ಅವುಗಳಿಗೆ ಪರಿಹಾರೋಪಾಯ ಸೂಚಿಸುವ ದೊಡ್ಡ ಜವಾಬ್ದಾರಿ ಸರಕಾರದ ಮೇಲಿದೆ. ಮೇಲ್ನೋಟಕ್ಕೆ ಕಾಣುವ ಅಂಶಗಳನ್ನು ನೋಡಿದರೆ ಈ ಸಚಿವಾಲಯದಿಂದ ಕೈಷಿ ಹಾಗೂ ಸಹಕಾರೀ ರಂಗಕ್ಕೆ ಒಳಿತಾಗುವುದಿದ್ದರೆ ಒಳ್ಳೆಯದೇ.
ಸಹಕಾರಿ ಸಚಿವಾಲಯದ ಜವಾಬ್ದಾರಿ ಗೃಹ ಸಚಿವ ಅಮಿತ್ ಶಾ ಅವರ ಹೆಗಲಿಗೆ ಬಿದ್ದಿರುವುದು ಹಲವಾರು ಅನುಮಾನ, ಆತಂಕ ಮತ್ತು ಸಂಶಯಗಳನ್ನು ಹುಟ್ಟು ಹಾಕಿರುವುದಂತೂ ಸತ್ಯ. ವಿಶೇಷವಾಗಿ ಇತ್ತೀಚೆಗೆ ತರಾತುರಿಯಲ್ಲಿ ಜಾರಿಯಾದ ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ವಿವಾದಾತ್ಮಕ ಕಾನೂನುಗಳಿಗೆ ದೊಡ್ಡ ಮಟ್ಟದ ವಿರೋದವೇ ವ್ಯಕ್ತವಾಗಿದೆ. ಇಂತಹ ವಿರೋಧ ಬರುತ್ತಿರುವ ರೈತ ಸಮುದಾಯದ ನಾಯಕರು ಉತ್ತರ ಪ್ರದೇಶದವರು. ಉತ್ತರ ಪ್ರದೇಶದಲ್ಲಿ ಮತ್ತೆ ಮುಂದಿನ ವರ್ಷ ವಿಧಾನ ಸಭೆಗೆ ಚುನಾವಣೆಗಳು ನಡೆಯಲಿವೆ. ರೈತ ಸಮುದಾಯದ ಕೆಂಗಣ್ಣೆಗೆ ಗುರಿಯಾಗಿರುವ ಬಿಜೆಪಿ, ರೈತ ಸಮುದಾಯದ ಮೇಲೆ ತನ್ನ ಹತೋಟಿಯನ್ನು ಮರಳಿ ಬಲಗೊಳಿಸಲು ಹೊಸ ಸಚಿವಾಲಯ ಬಳಕೆಯಾಗಬಹುದು ಎನ್ನುವ ಪ್ರಶ್ನೆಯೂ ಜನರ ಮುಂದಿದೆ. ಅಧಿಕಾರದ ಗದ್ದುಗೆ ಹಿಡಿಯಲು ವ್ಯೂಹಾತ್ಮಕವಾದ ಕ್ರಮಗಳನ್ನು ಅನುಸರಿಸಲೇ ಬೇಕಾಗುತ್ತದೆ. ಅಧಿಕಾರ ಸುಲಭದಲ್ಲಿ ಯಾರಿಗೂ ದಕ್ಕುವುದಿಲ್ಲ ಅದಕ್ಕಾಗಿ ಸಾಕಷ್ಟು ಬೆವರು ಸುರಿಸಲೇ ಬೇಕು. ಬಿಜೆಪಿ ಗುಜರಾತಿನಲ್ಲಿ, ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಸಹಕಾರಿ ರಂಗ ಸಾಕಷ್ಟು ಕೊಡುಗೆ ನೀಡಿದೆ ಎನ್ನುವ ಅಂಶವನ್ನು ಮರೆಯುವ ಹಾಗಿಲ್ಲ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಹಾಗೂ ದೇವೇಂದ್ರ ಫಡ್ನವೀಸ್ ಅವರಿಗೆ ರಾಜಕೀಯ ಶಕ್ತಿ ತುಂಬಿರುವುದು ಇದೇ ಸಹಕಾರಿ ಕ್ಷೇತ್ರ. ಕೃಷಿ ಹಾಗೂ ಸಹಕಾರೀ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಸಂಪನ್ಮೂಲ ಹರಿದು ಬರುತ್ತಿದ್ದು ಅದರ ಮೇಲಿನ ಹತೋಟಿ ಪ್ರಾಪ್ತವಾದಲ್ಲಿ ಸಮುದಾಯದ ದೊಡ್ಡ ವರ್ಗವೊಂದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಸುಗಮವಾಗಲಿದೆ ಎನ್ನುವ ಪಕ್ಕಾ ಲೆಕ್ಕಾಚಾರ ಅಮಿತ್ ಶಾ ಅವರದ್ದಿರಬಹುದು. ಗುಜರಾತ್ ರಾಜ್ಯದ 17,000 ಹಳ್ಳಿಗಳಲ್ಲಿ 16,500 ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಈ ಸಹಕಾರೀ ಸಂಘಗಳ ಅಧಿಕಾರ ಹಿಡಿಯುವ ಮೂಲಕ ಜನರೊಂದಿಗೆ ಸಂಪರ್ಕ ಸುಲಭ ಸಾಧ್ಯ. ಮಾತ್ರವಲ್ಲ ಸಮುದಾಯದ ಸಂಪನ್ಮೂಲ ಬಳಸಿಯೇ ಮತದಾರರ ಮನಸ್ಸಿಗೆ ಲಗ್ಗೆ ಇಡುವುದೂ ಸುಲಭ ಮತ್ತು ಪರಿಣಾಮಕಾರಿ. ಈ ಮಾರ್ಗದ ಮೂಲಕ ಗುಜರಾತ್‍ನಲ್ಲಿ ರಾಜಕೀಯ ಅಧಿಕಾರ ಪಡೆದ ಬಿಜೆಪಿ ಸಹಕಾರ ಕ್ಷೇತ್ರದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುವ ಮೂಲಕ ದೀರ್ಘ ಕಾಲದವರೆಗೂ ಅಧಿಕಾರದ ಗದ್ದುಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಭಾವಾನಾತ್ಮಕವಾದ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ಗೆಲ್ಲುವುದಕ್ಕೂ ಒಂದು ಮಿತಿ ಇದ್ದೇ ಇರುತ್ತದೆ. ಆ ಮಿತಿಯನ್ನು ದಾಟಿದ ನಂತರದ ಸಂದರ್ಭದಲ್ಲಿ ಜನರ ಬದುಕಿಗೆ ಉಪಯೋಗವಾಗುವಂತಹ ದಿನನಿತ್ಯದ ಅವಶ್ಯಕತೆಗಳನ್ನು ಒದಗಿಸಿಕೊಡುವ ವ್ಯವಸ್ಥೆಯಂತೂ ಆಗಲೇ ಬೇಕಿದೆ. ಅದನ್ನು ಜನರ ಸಹಭಾಗಿತ್ವದ ಮೂಲಕ ಒದಗಿಸಿಕೊಡಲು ಸಹಕಾರಿ ರಂಗಕ್ಕಿಂತ ಮಿಗಿಲಾದುದು ಬೇರೆ ಯಾವುದಿದೆ? ಇಲ್ಲಿ ಅವಕಾಶ ದಕ್ಕಿಸಿಕೊಳ್ಳುವ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶ ಪಡೆಯಲು ಒಂದು ಹಂತದ ತರಬೇತಿಯೂ ದೊರೆಯುತ್ತದೆ. ಪಕ್ಷ ರಾಜಕೀಯಕ್ಕೆ ಎರಡನೆಯ ಹಾಗೂ ಮೂರನೇ ಹಂತದ ನಾಯಕರಿಗೆ ತಾಲೀಮು ನೀಡುವ ಅವಕಾಶವೂ ಸಹಕಾರೀ ರಂಗದ ಚುಕ್ಕಾಣಿ ಹಿಡಿಯುವ ಮೂಲಕ ಅನಾಯಾಸವಾಗಿ ದೊರೆತರೆ ಯಾರಿಗೆ ತಾನೇ ಬೇಡ. ಇಂತಹ ವಿಷಯಗಳಲ್ಲಿ ಚಾಣಕ್ಷರಾಗಿರುವ ಬಿಜೆಪಿ ಹಾಗೂ ಸಂಘ ಪರಿವಾರ ಉಳಿದೆಲ್ಲರಿಗಿಂತ ಒಂದು ಹೆಜ್ಜೆ ಮುಂದಿದೆ. ಜನ ಸಂಪರ್ಕವಿರುವ ತಳಮಟ್ಟದ ಎಲ್ಲ ಸಂಘಟನೆಗಳ ಒಳಹೊಕ್ಕು ತಮ್ಮ ಹಿತಾಸಕ್ತಿಯನ್ನು ಜೋಪಾನವಾಗಿ ಪ್ತಿಷ್ಟಾಪಿಸುವುದರಲ್ಲಿ ಇವರು ನಿಸ್ಸೀಮರು. ಒಟ್ಟಿನಲ್ಲಿ ಈಗ ಆಗುತ್ತಿರುವ ಎಲ್ಲ ಬದಲಾವಣೆಗಳು ಬಂಡವಾಳ ಕೇಂದ್ರಿತ ಖಾಸಗೀಕರಣದ ಕಡೆಗೆಗಿನ ನಡೆಯಂತೆ ಕಂಡು ಬರುತ್ತಿರುವುದಂತೂ ದಿಟ, ಇಂತಹ ಲೆಕ್ಕಾಚಾರದ ನಡೆಯನ್ನು ಉಳಿದ ರಾಜಕೀಯ ಪಕ್ಷಗಳು ಹೇಗೆ ಎದುರಿಸುತ್ತವೆ ಎನ್ನುವುದರ ಮೇಲೆ ದೇಶದ ರಾಜಕೀಯ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಬೆಳವಣಿಗೆ ಆಧರಿಸಿದೆ ಎಂದಷ್ಟೇ ಹೇಳಬಹುದು.
ಡಾ. ಉದಯ ಕುಮಾರ ಇರ್ವತ್ತೂರು
Comments
Post a Comment
Please comment on the subjects posted on the site