ಕರ್ನಾಟಕ ಜಾಗತೀಕರಣ - ಮಾರುಕಟ್ಟೆ

ವಿಶ್ವ ಕನ್ನಡ ಸಮ್ಮೇಳನ, ಬೆಳಗಾವಿ

೧೧, ೧೨, ಮತ್ತು ೧೩ನೇ ಮಾರ್ಚ್ ೨೦೧೧

ಕರ್ನಾಟಕ ಜಾಗತೀಕರಣ - ಮಾರುಕಟ್ಟೆ

ಇಂದಿನ ತಂತ್ರಜ್ಞಾನಾಧಾರಿತ ಮುಕ್ತ ಮಾರುಕಟ್ಟೆ ಪ್ರೇರಿತ ಅಭಿವೃದ್ಧಿ ವಿನ್ಯಾಸ ಕರ್ನಾಟಕವನ್ನು ಹೊರ ಜಗತ್ತಿನೊಂದಿಗೆ ಗಾಢವಾಗಿ ಬೆಸೆಯುತ್ತಿದೆ. ಇಂತಹ ಗಾಢ ಬೆಸುಗೆಯ ಪರಿಣಾಮ ಕರ್ನಾಟಕಕ್ಕೆ ಹಲವಾರು ಅವಕಾಶಗಳು ದೊರೆತಿವೆ. ಅಂತಹ ಅವಕಾಶಗಳಿಗೆ ನಾವು ಬೇರೆ ಬೇರೆ ರೀತಿಯಲ್ಲಿ ಬೆಲೆಯನ್ನು ತೆರುತ್ತಲೇ ಇದ್ದೇವೆ. ಹಾಗಂತ ಕಾಲಚಕ್ರವನ್ನು ಹಿಮ್ಮುಖವಾಗಿ ತಿರುಗಿಸಲಾಗದು. ಬದಲಾವಣೆಯ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತಿರುವ ಸಮಾಜದ ಅಂಚಿನಲ್ಲಿರುವ ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಕರ್ನಾಟಕದ ನೆಲ, ಜಲ ಇತ್ಯಾದಿ ನೈಸರ್ಗಿಕ ಸಂಪತ್ತು ಮತ್ತು ಮಾನವ ಸಂಪನ್ಮೂಲವನ್ನು ಉಪಯೋಗಿಸಿ ಬೆಳೆಯುವ ಉದ್ಯಮರಂಗದ ಮೇಲೆ ಇಂತಹ ಜವಾಬ್ದಾರಿ ಕೊಂಚ ಹೆಚ್ಚಾಗಿಯೇ ಇದೆ. ಅಭಿವೃದ್ಧಿಯ ಭರಾಟೆಯಲ್ಲಿ ಮುಂದಿನ ಜನಾಂಗಕ್ಕೆ ಸೇರಬೇಕಾದ ನೆಮ್ಮದಿಯ ನೆಲೆಗಳನ್ನು, ಜೀವ ಸೆಲೆಗಳನ್ನು ಆಪೋಶನ ತೆಗೆದುಕೊಳ್ಳುವ ನಮ್ಮ ಆತುರದ ಕ್ರಮಗಳು ದೂರದರ್ಶಿತ್ವ ಕಳೆದುಕೊಂಡು ಕುರುಡಾಗಿವೆ. ಇಂತಹ ಅಪಾಯಗಳ ಬಗ್ಗೆ ಸಾಮುದಾಯಿಕ ಉತ್ತರದಾಯಿತ್ವದ ಚೌಕಟ್ಟಿನಲ್ಲಿ ಸಮಗ್ರವಾದ ಆರೋಗ್ಯಪೂರ್ಣ ಚರ್ಚೆಯೊಂದನ್ನು ಆರಂಭಿಸಬೇಕಾದ ಅಗತ್ಯವಿದೆ. ವಿಶ್ವ ಕನ್ನಡ ಸಮ್ಮೇಳನದ ಇಂತಹ ಸಂದರ್ಭಗಳು ಈ ಉದಾತ್ತ ಆಶಯಗಳಿಗೆ ನೆಪವಾದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೇನಿದೆ?

ಡಾ| ಉದಯ ಕುಮಾರ್ ಇರ್ವತ್ತೂರು, ಸಹ ಪ್ರಾದ್ಯಾಪಕರು ಹಾಗೂ ಎಂ.ಬಿ.ಎ. ವಿಭಾಗದ ಸಂಯೋಜಕರು, ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ, ಮಂಗಳೂರು, ದ.ಕ. - ೧


ತಾನು ಬದುಕುವ ಪರಿಸರದ ಹೊರಗೆ ಸೀಮೊಲ್ಲಂಘನ ಮಾಡುವ ಮನುಷ್ಯ ಸಹಜ ಹಾತೊರೆಯುವಿಕೆಗೆ ನೂರಾರು ನೆಪಗಳು. ಅಲೆಕ್ಸಾಂಡರ್ ದಂಡಯಾತ್ರೆ ಹೊರಡಲು, ವಾಸ್ಕೋಡಗಾಮ ಭಾರತಕ್ಕೆ ಬರಲು, ಹ್ಯೂಯೆನ್‌ತ್ಸಾಂಗ್ ಭಾರತಕ್ಕೆ ಬರಲು ನೆಪವಾದದ್ದೂ ಇಂತಹ ಹಾತೊರೆಯುವಿಕೆಯೇ. ಆಧುನಿಕತೆಯ ಅಬ್ಬರದ ಈ ದಿನಮಾನಗಳಲ್ಲಿ ಸೀಮೊಲ್ಲಂಘನದ ಹಾತೊರೆಯುವಿಕೆಯ ಹಿಂದೆ ಚಾಲಕ ಶಕ್ತಿಯಾಗಿ ಯಾ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವುದು ವ್ಯಾಪಾರೀ ಉದ್ದೇಶಗಳು. ಇಂತಹ ವ್ಯಾಪಾರೀ ಉದ್ದೇಶಗಳು ಈ ಹಿಂದೆಯೂ ಇದ್ದುವು. ಆದರೆ ಹಿಂದೆ ಅದು ಇಂದಿನAತೆ ನಿರ್ಧಾರಕ ಶಕ್ತಿಯಾಗಿರಲಿಲ್ಲ. ಇಂದು ಬಂಡವಾಳ ನಿರ್ದೇಶಿತ ಲಾಭಾಂಶ ಆಧಾರಿತ ವ್ಯಾಪಾರೀ ಉದ್ದೇಶ ಜಗತ್ತಿನ ವಿವಿಧ ಸಮುದಾಯಗಳನ್ನು ಕಾಲ, ಪ್ರದೇಶಗಳ ವ್ಯಾಪ್ತಿಯನ್ನು ಸ್ಥಿರೀಕರಿಸಿ ಬಹಳ ಸುಲಭದಲ್ಲಿ ಅಥವಾ ಲೀಲಾಜಾಲವಾಗಿ ಮುಖಾಮುಖಿಯಾಗಿಸುತ್ತಿದೆ. ಇಂತಹ ಮುಖಾಮುಖಿ ಸಮುದಾಯದ ಜೀವನ ವಿಧಾನಗಳಲ್ಲಿ ಉಂಟು ಮಾಡುತ್ತಿರುವ ತಳಮಳ ತಲ್ಲಣಗಳು ಇನ್ನೂ ನಮ್ಮ ಹಿಡಿತಕ್ಕೆ ಸಿಕ್ಕಿಲ್ಲವೆಂದೇ ಹೇಳಬಹುದು. ಇಂತಹ ವರ್ತಮಾನದ ಈ ಸ್ಥಿತಿಗೆ ಜಾಗತೀಕರಣ ಕಾರಣವೆಂದು ಹೇಳಲಾಗುತ್ತಿದೆ.



ಕರ್ನಾಟಕವೆನ್ನುವ ಭೌಗೋಳಿಕ ಪ್ರದೇಶದಲ್ಲಿ ವಾಸಿಸುವ ಜನರ ಜೀವನ ಕ್ರಮವನ್ನು ಹೊರಜಗತ್ತಿನ ಆಗುಹೋಗುಗಳೊಂದಿಗೆ ದಟ್ಟವಾಗಿ ಬೆಸೆಯುವ ಬೆಳವಣಿಗೆಯನ್ನು ನಾವು ಇಂದು ಸರಳವಾಗಿ ಜಾಗತೀಕರಣವೆನ್ನಬಹುದು. ಕರ್ನಾಟಕ ತನ್ನಿಂದ ಬಹು ದೂರವಿರುವ ಒಂದು ಸಮುದಾಯದೊಂದಿಗೆ ಸಂವಹಿಸಲು, ಸಂಬAಧವಿರಿಸಿಕೊಳ್ಳಲು, ವ್ಯವಹಾರದಲ್ಲಿ ತೊಡಗಲು ಜಾಗತೀಕರಣದ ಕಾರಣದಿಂದ ಸಾಧ್ಯವಾಗಿದೆ. ಈ ರೀತಿಯ ಸಂಬAಧಗಳು ಕರ್ನಾಟಕದ ಜೀವನ ಕ್ರಮವನ್ನು ಯಾ ಕರ್ನಾಟಕ ಜನರ ಬದುಕಿನ ರೀತಿಯನ್ನು ಪ್ರಭಾವಿಸುತ್ತದೆ. ಹಾಗಾಗಿ ಕರ್ನಾಟಕ ಬದಲಾಗುತ್ತಿದೆ. ಕರ್ನಾಟಕದ ಜನ ಬದಲಾಗುತ್ತಿದ್ದಾರೆ ಎನ್ನುವ ಮಾತುಗಳನ್ನು ನಾವಿಂದು ಕೇಳುತ್ತಿದ್ದೇವೆ. ಇಂತಹ ಬದಲಾವಣೆಯಿಂದ ಉಂಟಾಗುವ ಪರಿಣಾಮಗಳು ಕೇವಲ ಏಕಮುಖವಾಗಿಲ್ಲ, ಬದಲಿಗೆ ಬಹುಮುಖಿಯಾಗಿದೆ. ಕರ್ನಾಟಕದ ಜನ ಸಮುದಾಯದ ಮೇಲೆ ಹೊರಜಗತ್ತು ಪರಿಣಾಮ ಉಂಟುಮಾಡಿದರೆ ಕರ್ನಾಟಕವೂ ಹೊರ ಜಗತ್ತಿನ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಆದರೆ ಪರಿಣಾಮದ ಪರಿಮಾಣದಲ್ಲಿ, ತೀವ್ರತೆಯಲ್ಲಿ ವ್ಯತ್ಯಾಸಗಳಿವೆ. ಪರಿಣಾಮಗಳ ಬಗ್ಗೆ ಪ್ರಸ್ತಾಪಿಸುವ ಮೊದಲು ಇಂತಹ ಬದಲಾವಣೆಯನ್ನು ಉಂಟುಮಾಡಿದ ಮತ್ತು ಮಾಡುತ್ತಿರುವ ವಿಚಾರಗಳ ಬಗ್ಗೆ ಪ್ರಸ್ತಾಪಿಸಬೇಕಿರುವುದು ಅಗತ್ಯವೆನಿಸುತ್ತದೆ.



ಇಂದು ಕರ್ನಾಟಕ ಹೊರಜಗತ್ತಿಗೆ ಹಿಂದೆAದಿಗಿAತಲೂ ಹೆಚ್ಚು ಹತ್ತಿರವಾಗಿರುವುದಕ್ಕೆ ಪ್ರಮುಖ ಕಾರಣ ಹೆದ್ದಾರಿಗಳ ನಿರ್ಮಾಣ. ಈ ಹೆದ್ದಾರಿಗಳು ಅದೃಶ್ಯವಾಗಿರುವ ಹೆದ್ದಾರಿಗಳು. ಇಂತಹ ಹೆದ್ದಾರಿಗಳ ಮೂಲಕ ಮಾಹಿತಿ ತಂತ್ರಜ್ಞಾನ, ಬಂಡವಾಳ ಹಾಗೂ ಅನ್ಯ ಸಂಸ್ಕöÈತಿಯ ಹರಿವು ಬಹಳ ದೊಟ್ಟ ಮಟ್ಟದಲ್ಲಿ ಆಗುತ್ತಿದೆ. ಈ ಹೆದ್ದಾರಿಗಳ ನಿರ್ಮಾಣವಾಗಿರುವುದಕ್ಕೆ, ಪ್ರಮುಖ ಕಾರಣ ಕರ್ನಾಟಕ ಮತ್ತು ಭಾರತವನ್ನು ಆಕ್ರಮಿಸಿಕೊಂಡಿರುವ ಮಾರುಕಟ್ಟೆ. ಮಾರುಕಟ್ಟೆಯನ್ನು ನಿರ್ಧರಿಸುವ ಚಾಲಕ ಶಕ್ತಿ ಬಂಡವಾಳ ಮತ್ತು ಉದ್ಯಮಶೀಲತೆಯನ್ನು ಆತ್ಮವಾಗಿ ಪಡೆದಿರುವ ಮುಕ್ತ ಅರ್ಥ ವ್ಯವಸ್ಥೆಯಾಗಿದೆ. ಮಾರುಕಟ್ಟೆ ಅಂದರೆ ಬೇಡಿಕೆ, ಪೂರೈಕೆಗಳನ್ನು ಮುಖಾಮುಖಿಯಾಗಿಸುವ ಒಂದು ನೈಪುಣ್ಯ ಅಥವಾ ತಂತ್ರಗಾರಿಕೆ. ಬೇಡಿಕೆಗಳು ಮನುಷ್ಯನೊಳಗಿರುವ (ಸ್ವಾರ್ಥ ಮತ್ತು ಸುಖದ) ‘ಸ್ವ’ ಸುಖಕ್ಕೆ ಸೋಲುವ, ಜೀವನದಲ್ಲಿ ಹಾಯಾಗಿರಬೇಕೆನ್ನುವ ಸುಪ್ತ ಬಯಕೆಯ ದರ್ಶನವಾಗಿದೆ. ಮಾನಿನಿಯರು ಪುರುಷರಲ್ಲಿ ಸುಖ ಲೋಲುಪತೆಯ ಕಿಚ್ಚುಹಚ್ಚುವಂತೆ, ಮುಕ್ತ ಅರ್ಥವ್ಯವಸ್ಥೆಯ ನಿರ್ಧಾರಕ ಶಕ್ತಿಗಳು ಜನಮನದಲ್ಲ್ಲಿ ಆಸೆಯ ಬೀಜವನ್ನು ಬಿತ್ತಿ ಅಂತಹ ಆಸೆಯ ಪೂರೈಕೆಗಾಗಿ ಕಾರ್ಯೋನ್ಮುಖನಾಗುವಂತೆ ಮಾಡುವ ಮೂಲಕ ವಸ್ತು ಯಾ ಸೇವೆಯ ರೂಪದಲ್ಲಿ ಸಂಪತ್ತು ಸೃಷ್ಟಿಸುತ್ತವೆ. ಈ ರೀತಿ ಸಮುದಾಯದಲ್ಲಿ ‘ಸ್ವ’ ದ ಕಲ್ಪನೆಯನ್ನು ದುಡಿಸುವ ಮೂಲಕ ಹಾಗೂ ಸಮಾಜವನ್ನು ಕ್ರಿಯಾಶೀಲಗೊಳಿಸುವುದು ಇದರ ಉದ್ದೇಶ. ವಸ್ತು ಯಾ ಸೇವೆಯನ್ನು ಉತ್ಪಾದಿಸುವ (ಸಂಪತ್ತು ಸೃಷ್ಟಿಸುವ) ಕ್ರಿಯೆಯಲ್ಲಿ ಇಡೀ ಸಮುದಾಯವನ್ನು ತೊಡಗಿಸಿ ತನ್ಮೂಲಕ ಸ್ವತಂತ್ರಗೊಳ್ಳುಬಹುದೆನ್ನುವ ನಂಬಿಕೆಯನ್ನು ಇಂತಹ ಅಭಿವೃದ್ಧಿಯ ಸಿಧ್ಧಾಂತ ಪ್ರತಿಪಾದಿಸಿದರೂ, ವಾಸ್ತವದಲ್ಲಿ ಅದು ಸುಲಭ ಸಾಧ್ಯವಲ್ಲ. ಇಂತಹ ವ್ಯವಸ್ಥೆಯ ಹಿಂದಿರುವ ಬಂಡವಾಳ ಮತ್ತು ಉದ್ಯಮ ಶೀಲತೆ ನಿಯಂತ್ರಕ ಶಕ್ತಿ ಪಡೆದಿರುತ್ತದೆ. ಹಾಗೆ ಮನುಷ್ಯನ ಸ್ವಾರ್ಥವನ್ನು ಬಡಿದೆಬ್ಬಿಸಿ ಅವನನ್ನು ಕ್ರಿಯಾಶೀಲಗೊಳಿಸುವ ಈ ಮಾದರಿ, ಬಹಳಷ್ಟು ದೇಶಗಳಲ್ಲಿ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಬೆಳೆಯಿತು. ಇಂತಹ ಬೆಳವಣಿಗೆಗೆ ಒಂದು ಚಾರಿತ್ರಿಕ ಹಿನ್ನೆಲೆಯೂ ಇದೆ ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ. ಅಶ್ವಮೇಧದ ಕುದುರೆಯನ್ನು ಲೋಕ ಪರ್ಯಟನೆಗೆ ಬಿಟ್ಟ ಹಾಗೆ, ಮುಕ್ತ ಮಾರುಕಟ್ಟೆಯ ಪ್ರತಿಪಾದಕ ಶಕ್ತಿಗಳು ಇಂತಹ ಚಿಂತನೆ, ವಿನ್ಯಾಸ ಎಲ್ಲಾ ದೇಶಗಳೊಳಗೆ ಪ್ರವೇಶಿಸುವಂತೆ ಮಾಡಿವೆ. ಸದ್ಯದ ಮಟ್ಟಿಗಂತೂ ಮುಕ್ತ ಆರ್ಥ ವ್ಯವಸ್ಥೆಗೆ ಸವಾಲೊಡ್ಡಬಲ್ಲ ಸಾಧ್ಯತೆಗಳು ಕಂಡು ಬರದೇ ಇರುವುದರಿಂದ ಅತಿರಥ ಮಹಾರಥರೆಲ್ಲರೂ ಕಪ್ಪ ಕಾಣಿಕೆ ನೀಡಿ ಇದರ ಯಾಜಮಾನ್ಯವನ್ನು ಒಪ್ಪಿಕೊಡಿದ್ದೇವೆ.



ಉತ್ಪಾದನೆಯ ಪರಿಕರಗಳು ವ್ಯಕ್ತ ರೂಪದಿಂದ ಅವ್ಯಕ್ತಕ್ಕೆ ರೂಪಾಂತರ ಹೊಂದಲು ಅನುಕೂಲವಾಗುವಂತಹ ತಂತ್ರಜ್ಞಾನ ಇವತ್ತು ಬೆಳೆದಿರುವುದರಿಂದ ಮಾರುಕಟ್ಟೆಯ ವಿಸ್ತರಣೆ ಅತ್ಯಂತ ವೇಗವಾಗಿ ನಡೆಯುತ್ತಿದೆ. ಮುಂಜಾನೆ ಗಿಡದಿಂದ ಕಿತ್ತ ದಕ್ಷಿಣ ಕನ್ನಡದ ಶಂಕರಪುರದ ಮಲ್ಲಿಗೆ ಸಂಜೆಯ ಹೊತ್ತಿಗೆ ಮದ್ಯಪ್ರಾಚ್ಯಕ್ಕೆ ತಲುಪುತ್ತದೆ. ಅಮೇರಿಕಾದ ವೈದ್ಯರೊಬ್ಬರು ರೋಗಿಯ ಎಕ್ಸ್ರೇ ತೆಗೆದು ಅದನ್ನು ವಿಶ್ಲೇಶಣೆಗೆ ಬೆಂಗಳೂರಿನ ಹೊರಗುತ್ತಿಗೆ ಸಂಸ್ಥೆಗೆ ಕಳುಹಿಸಬಹುದಾಗಿದೆ. ವಿಶ್ವದ ಯಾವ ಮೂಲೆಯಲ್ಲಿರುವ ಗೆಳೆಯ/ಗೆಳತಿಯರೊಂದಿಗೆ ಹರಟಬಹುದಾಗಿದೆ. ಅದರೊಟ್ಟಿಗೇನೇ ಪ್ರಪಂಚದ ಯಾವುದೋ ಭಾಗದಲ್ಲಿದ್ದುಕೊಂಡೇ ಹಫ್ತಾ ವಸೂಲಿ ಮಾಡುವವರು, ಅಂತರ್ಜಾಲದ ಮೂಲಕ ಸಮಾಜ ಕಂಟಕವಾದ ಕ್ರಿಯೆಗಳೂ ನಡೆಸುತ್ತಿರುವ ವಿದ್ಯಾಮಾನವೂ ನಡೆಯುತ್ತಿದೆ. ಇಂತಹ ಜಾಗತೀಕರಣದ ಮಾರುಕಟ್ಟೆ ವಿಸ್ತರಣೆಯ ಕ್ರಿಯ ಅಂಗೈಯೊಳಗೆ ವಿಶ್ವರೂಪ ದರ್ಶನ ಮಾಡಿಸಿ ಕರ್ನಾಟಕಕ್ಕೆ ಉದ್ಯೋಗ, ಉದ್ಯಮಶೀಲತೆ, ವಿಶ್ವ ಮಾನ್ಯತೆಯೇ ಮುಂತಾದ ಹಿರಿಮೆ ಗರಿಮೆಗಳನ್ನು ಮೂಡಿಸಿದೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರಿತಿಸಿಕೊಂಡಿರುವುದು ಇಂತಹ ಜಾಗತೀಕರಣದಿಂದ. ಕರ್ನಾಟಕದಲ್ಲಿ ಬಹಳಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ. ಹಳ್ಳಿಯ ಹೈದರು ನ್ಯೂಯಾರ್ಕ್, ವಾಷಿಂಗ್ಟನ್, ಫ್ರಾಂಕ್‌ಫರ್ಟ್, ಬರ್ಲಿನ್, ಪಟ್ಟಣಗಳಿಗೆ ವಾರದ ಸಂತೆಗೆ ಹೋಗಿ ಬಂದಷ್ಟೇ ಸಲೀಸಾಗಿ ಹೋಗಿಬರುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಬದುಕಿನಲ್ಲಿಯೂ ಆಯ್ಕೆಗಳು ಹುಟ್ಟಿಕೊಂಡಿವೆ. ಇದೆಲ್ಲದರ ಮದ್ಯೆ ಇಂತಹ ಬೆಳವಣಿಗೆಗಳಿಂದ ನಮ್ಮ ಸಂಸ್ಕöÈತಿಗೆ ಮೈಲಿಗೆಯಾಯ್ತು ಎಂದು ಮೂಗು ಮುರಿಯುವುದೂ ನಡೆದಿದೆ.



ವರ್ತಮಾನದಲ್ಲಿ ನಾವು ಎದುರಿಸುವ ಈ ಸಂದರ್ಭ ಸ್ವಾಭಾವಿಕವೂ ಸಹಜವೂ ಆಗಿದೆ. ಇದು ನಮ್ಮ ಮಿತಿಗೆ ಮತ್ತು ಮತಿಗೆ ಸಂಪೂರ್ಣವಾಗಿ ದಕ್ಕದೇ ಇರಬಹುದು. ಹಾಗಂತ ಇದು ಪ್ರಪಂಚವನ್ನೇ ಅಲ್ಲೋಲಕಲ್ಲೋಲ ಮಾಡೀತು ಎಂದು ಭಯಪಡಬೇಕಾದ ಅಗತ್ಯ ಇಲ್ಲವೆಂದೇ ನನ್ನ ಅನಿಸಿಕೆ. ಇದರ ಅರ್ಥ ಈ ಬೆಳವಣಿಗೆಯಿಂದ ಸಮಸ್ಯೆಗಳೇ ಇಲ್ಲವೆಂದು ಹೇಳಲಾಗದು. ಸದ್ಯ ಪರಿಸ್ಥಿತಿಯಲ್ಲೂ ಮಾರುಕಟ್ಟೆ ವಿಸ್ತರಣೆ ಮತ್ತು ಜಾಗತೀಕರಣದಿಂದ ಉಂಟಾಗಿರುವ ಸಮಸ್ಯೆಯನ್ನು ನಾವು ವಿಶ್ಲೇಷಿಸಬೇಕಾದ ರೀತಿ ಯಾವುದು ಮತ್ತು ಇದಕ್ಕೆ ಸರಕಾರ, ಸಮುದಾಯ ಮತ್ತು ಇಡೀ ಸಮಾಜ ಹೇಗೆ ಸ್ಪಂದಿಸಬೇಕು ಎನ್ನುವುದರತ್ತ ನಾವು ಗಮನ ಹರಿಸಬೇಕಿದೆ. ಬಹಳಷ್ಟು ಕಾಲದ ವರೆಗೆ ನಾವು ಬರೀ ಪ್ರಶ್ನೆಗಳನ್ನೇ ಕೇಳುತ್ತ ಬಂದೆವು ಉತ್ತರಿಸುವ ಯಾವ ಉತ್ತರದಾಯಿತ್ವವಿಲ್ಲದೇ ಹೀಗೆ ಜಾರಿಕೊಳ್ಳುವುದು ಸರಿಯಲ್ಲ ಎನ್ನುವ ಮಾತೂ ಉಂಟು.



ಮಾರುಕಟ್ಟೆ ಆಧಾರಿತ ಜಾಗತೀಕರಣ ಇಂದು ಕರ್ನಾಟಕದ ಒಂದು ಪದರವನ್ನು ಮಾತ್ರ ಜಗತ್ತಿನೊಂದಿಗೆ ಬೆಸೆಯುತ್ತಿದೆ ಅಥವಾ ಬೆಸೆದಿದೆ. ಇವತ್ತು ಕರ್ನಾಟಕದ ಜನರಲ್ಲಿ ಯಾರಿಗೆ ಅವಕಾಶಗಳನ್ನು ಬಾಚಿಕೊಳ್ಳುವ ಅವಕಾಶವಿದೆಯೋ ಅಂತಹವರು ಮಾತ್ರ ಈ ಬದಲಾವಣೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಉಳಿದವರಿಗೆ ಇದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಬದಲಾವಣೆಯಿಂದ ಯಾವ ಪ್ರಯೋಜನವನ್ನೂ ಪಡೆಯದ ಹಳ್ಳಿಯ ಮಂದಿ, ಸಮಾಜದ ಅಂಚಿನಲ್ಲಿರುವ ಜನ ದುರ್ಬಲ ವರ್ಗದವರು ಈ ಬದಲಾವಣೆಯಿಂದ ಅನಾನುಕೂಲತೆಗಳಿಗೂ ಒಳಗಾಗಿದ್ದಾರೆ. ದೇಶದ ಕೃಷಿರಂಗ ಇನ್ನಿಲ್ಲದ ತೊಂದರೆಗೆ ಒಳಗಾಗಿದೆ. ರೈತರ ಆತ್ಯಹತ್ಯೆಯ ಸರಣಿಗಳು ಇಂದು ವರ್ತಮಾನ ಪತ್ರಿಕೆಯು ಮೂಲೆಗೆ ಸರಿದಿವೆ. ಇಂತಹ ಬದಲಾವಣೆಗೆ ಕಾರಣವೇನು, ಇಂತಹ ಪರಿಣಾಮಗಳನ್ನು ಹೇಗೆ ತಹಬಂದಿಗೆ ತರಬಹುದು ಎನ್ನುವ ಕುರಿತು ಯೋಚಿಸುವ ಮನಸ್ಸುಗಳು, ಯೋಚಿಸಬೇಕಾದ ಮನಸ್ಸುಗಳು ಚುನಾವಣೆ ಗೆಲ್ಲುವ ಚದುರಂಗದಾಟದಲ್ಲಿ ನಿರತವಾಗಿವೆ ಯಾ ಸುದ್ದಿಯ ಆಮ್ಲಜನಕ ಅರಸುತ್ತಿರುವ ಅಬ್ಬೇಪಾರಿ ಆತ್ಮಗಳಾಗಿವೆ. ಇದು ನಮ್ಮ ದೇಶದ ಕತೆ ಮಾತ್ರವಲ್ಲ ಎಲ್ಲರ ಕತೆಯೂ ಹೌದು. ಅವಕಾಶವನ್ನು ಪಡೆದು ಸಂಪತ್ತುಗಳಿಸಿದವರಿಗೆ ಮುಂದೇನು? ಇನ್ನೇನನ್ನು ಆಪೋಶನ ತೆಗೆದುಕೊಳ್ಳುವುದು ಎನ್ನುವ ಸಮಸ್ಯೆಯಾದರೆ, ಇಂತಹ ಬದಲಾವಣೆಯಿಂದ ಯಾವ ಲಾಭವೂ ಆಗದ ಮಂದಿಗೆ ಮುಂದೆ ಹೇಗೆ? ಇನ್ನೆಷ್ಟು ದಿನ ಹೀಗೆ ಎನ್ನುವ ಸಮಸ್ಯೆಯಿದೆ. ತಿಂದವನಿಗೆ ಬೊಜ್ಜು ಕರಗಿಸುವ ಸಮಸ್ಯೆಯಾದರೆ ಹಸಿದವನಿಗೆ ಹೊಟ್ಟೆ ತುಂಬಿಸುವ ಸಮಸ್ಯೆ.



೧೯೮೦ರ ದಶಕದ ನಂತರದ ಇಡೀ ಬದಲಾವಣೆಗಳನ್ನು ಸೂಕ್ಷ÷್ಮವಾಗಿ ಅವಲೋಕಿಸಿದರೆ, ಈ ಅವಧಿಯಲ್ಲಿ ಬಹಳಷ್ಟು ಒಳ್ಳೆಯ ಸಂಗತಿಗಳು, ಧನಾತ್ಮಕ ಬದಲಾವಣೆಗಳು ನಡೆದಿವೆಯಾದರೂ ಅದರ ಫಲ ಕೆಲವು ಕಡೆ ಘನೀಕರಿಸಿ ಸಮುದಾಯದ ನಿರಾತಂಕ ಉಸಿರಾಟಕ್ಕೆ ತಡೆಯುಂಟು ಮಾಡಿದೆ. ಮಾರುಕಟ್ಟೆ ಶಕ್ತಿ ಕರ್ನಾಟಕದ ಎಲ್ಲ ರಂಗಗಳನ್ನೂ, ಎಲ್ಲ ಸ್ತರಗಳಲ್ಲೂ ಪ್ರವೇಶ ಮಾಡಿರುವುದರಿಂದ ಮನುಷ್ಯ ಸಮುದಾಯದಿಂದ ಬೇರ್ಪಟ್ಟು ‘ಸ್ವ’ ಹಿತಾಸಕ್ತಿಯನ್ನು ನೋಡುವ ಮನೋವೃತ್ತಿ ಬೆಳೆಸಿಕೊಳ್ಳುತ್ತಿದ್ದಾನೆ. ಮಾರುಕಟ್ಟೆಯಲ್ಲಿ ಎಲ್ಲರೂ ಗೆದ್ದಂತೆ ಕಂಡರೂ ಎಲ್ಲರೂ ಗೆಲ್ಲಲಾಗುವುದಿಲ್ಲ. ಮಾರುಕಟ್ಟೆ ಹುಲುಸಾಗಿ ಬೆಳೆಯುವುದರ ಸಂಕೇತವೇ ಬಂಡವಾಳದ ಸಮೃದ್ಧ÷ ಬೆಳವಣಿಗೆ. ಬಂಡವಾಳ ಬೆಳೆಯುವಾಗ ಒಂದು ಕಡೆಯ ಸಂಪನ್ಮೂಲವನ್ನು ಹೀರಿಕೊಂಡು ಸದೃಢವಾದಾಗ ಮಾತ್ರ ಇಂತಹ ಬೆಳವಣಿಗೆ ಸಾಧ್ಯ. ಇಂದಿನ ಯಶಸ್ವಿ ಉದ್ಯಮವೆನ್ನುವ ಫಲಭರಿತ ವೃಕ್ಷದ ಬೇರುಗಳು ಇಡೀ ನಾಡು, ನುಡಿ, ಸಂಸ್ಕöÈತಿಯ ಆಳಕ್ಕಿಳಿದು ಅದರ ಸ್ವತ್ವವನ್ನು ಹೀರಿ ಬೆಳೆಯುತ್ತಿದೆ ಎನ್ನುವುದನ್ನು ನೆನಪಿನಲ್ಲಿಡಬೇಕಾಗುತ್ತದೆ. ಉದ್ಯಮಗಳು ನೀಡುವ ಅಪಾರ ಸಂಬಳ ಹೊಸ ವರ್ಗವೊಂದನ್ನು ಸೃಷ್ಟಿ ಮಾಡಿದ್ದು, ಅಂತಹ ವರ್ಗ ಸಂಪನ್ಮೂಲವನ್ನು ವಿನಿಯೋಗಿಸುವ ವ್ಯಕ್ತಿ ಸ್ವಾತಂತ್ರ÷್ಯ ಹೊಂದಿದರೂ ಆ ವ್ಯಕ್ತಿ ಸ್ವಾತಂತ್ರ‍್ಯ ಅಭಿವ್ಯಕ್ತಿಗೊಳ್ಳುವುದು ಸಮುದಾಯದಲ್ಲಿ ಮತ್ತು ಸಮುದಾಯದ ಬದುಕನ್ನು ಪ್ರಭಾವಿಸುವ ಹಲವಾರು ಸಂಸ್ಥೆಗಳ ಮೂಲಕ, ಮಾರುಕಟ್ಟೆ ವಿಸ್ತರಣೆಯ ಪರಿಣಾಮವಾಗಿ ಹುಟ್ಟಿಕೊಳ್ಳುವ ಹೊಸ ವರ್ಗ ಸಮುದಾಯದ ಸಂಪನ್ಮೂಲಗಳನ್ನು ಭೋಗ, ವೈಭವಗಳಿಗೆ ಬಳಸಿಕೊಳ್ಳುವುದರಿಂದ ಸಹಜವಾಗಿ ತಳವರ್ಗದಲ್ಲಿ ಸಂಪನ್ಮೂಲದ ಕೊರತೆಯುಂಟಾಗುತ್ತದೆ. ಹಣದ ಮೂಲಕ ಕೊಳ್ಳುವ ಸ್ವಾತಂತ್ರ÷್ಯ ಒದಗಿರುವ ಕಾರಣದಿಂದ ಹಣ ಬಹಳ ಮುಖ್ಯವಾಗುತ್ತದೆ ಇಂತಹ ಒಂದು ಬೆಳವಣಿಗೆಯ ಕಾರಣದಿಂದ ಹಣದ ಗುಣ ಮುಖ್ಯವಾಗಿ ಉಳಿದೆಲ್ಲ ವಿಷಯಗಳೂ ಗೌಣವಾಗುತ್ತವೆ. ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕöÈತಿಕ ರಂಗದಲ್ಲಿಯೂ ಈ ರೀತಿಯ ಒಂದು ಪಲ್ಲಟವನ್ನು ಕಳೆದ ಎರಡು ಮೂರು ದಶಕಗಳಲ್ಲಿ ನಾವು ಗುರುತಿಸಬಹುದು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಇಂತಹ ಒಂದು ಬದಲಾವಣೆ ಬಹಳ ಸ್ಪಷ್ಟವಾಗಿಯೇ ನಮ್ಮ ಅರಿವಿಗೆ ಬರುತ್ತದೆ. ಕರ್ನಾಟಕದಲ್ಲಿಯೂ ನಾವು ಹಂತ ಹಂತವಾಗಿ ಇಂತಹ ಒಂದು ಸ್ಥಿತ್ಯಂತರವನ್ನು ಗಮನಿಸಬಹುದಾಗಿದೆ.



ಮಾರುಕಟ್ಟೆಯ ವಿಸ್ತರಣೆಯ ಅಂಗವಾಗಿ ಉದ್ಯಮ ರಂಗದ ಸ್ವರೂಪ ಬದಲಾಗುತ್ತಿದೆ. ಇಂತಹ ಉದ್ಯಮಗಳು ಹೆಚ್ಚು ಭೂಮಿ, ಹೆಚ್ಚು ನೀರು, ಇಂಧನ ಮತ್ತು ಶಕ್ತಿಯ ಮೂಲಗಳನ್ನು ಬಯಸುತ್ತಿವೆ. ಈ ರೀತಿಯ ಉದ್ಯಮರಂಗದ ಬೇಕುಗಳಿಗೆ ಸರಕಾರ ಸ್ಪಂದಿಸಬೇಕಾಗಿರುವುದು ಸಹಜವೇ ಆದರೂ ಇದರಿಂದ ಜನಸಾಮಾನ್ಯರಿಗೆ ಆಗಬಹುದಾದ ಅನಾನುಕೂಲಗಳ ಬಗ್ಗೆ ಚಿಂತಿಸಬೇಕಾದ ಉತ್ತರದಾಯಿತ್ವ ಸರಕಾರದ ಮೇಲಿದೆ. ಬಹಳಷ್ಟು ಸಂದರ್ಭಗಳಲ್ಲಿ ಸರಕಾರ, ಅಧಿಕಾರಿ ವರ್ಗ ಇಂತಹ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದೇ ಹೇಳಬಹುದು. ವಿಶೇಷ ಆರ್ಥಿಕ ವಲಯ, ಕೈಗಾರಿಕಾ ಎಸ್ಟೇಟುಗಳು, ರಸ್ತೆ ಅಗಲೀಕರಣ ಇನ್ನಿತರ ವಾಣಿಜ್ಯ ಉದ್ದೇಶಗಳಿಗೆ ಭೂಮಿ, ನೀರು, ಗಾಳಿ ಮಲಿನಗೊಂಡು ಅದರ ಇಡೀ ಹೊರೆ ಇದರಿಂದ ಯಾವ ಪ್ರಯೋಜನವೂ ಪಡೆಯದ ಜನವರ್ಗಕ್ಕೆ ವರ್ಗಾವಣೆಯಾಗಿರುವುದನ್ನು ಕಾಣಬಹುದು. ಇಂತಹ ಎಲ್ಲ ಸಂದರ್ಭಗಳಲ್ಲಿ ನಾವು ನೆನಪಿನಲ್ಲಿ ಇಡಬೇಕಾದ ಅಂಶವೆAದರೆ ಕನ್ನಡದ ಭಾಷೆ, ಸಂಸ್ಕöÈತಿ, ಮಾನವೀಯ ಸೆಳೆತಗಳು ಇಂದು ಸಮೃದ್ಧವಾಗಿರುವುದು ಕರ್ನಾಟಕದ ಹಳ್ಳಿಗಳಲ್ಲಿ. ಪಟ್ಟಣಗಳು ಬೆಳೆಯುತ್ತಿರುವಾಗ ಹಳ್ಳಿಗಳು ಮಾಡುತ್ತಿರುವ ತ್ಯಾಗ ಪ್ರಮುಖವಾದದ್ದು, ಆರ್ಥಿಕ, ಶೈಕ್ಷಣಿಕ, ರಾಜಕೀಯ ಅಸಮಾನ ಪಾತಳಿಯ ಮೇಲಿರುವ ಹಳ್ಳಿಯ ಮತ್ತು ಪೇಟೆಯ ಜನವರ್ಗಗಳಲ್ಲಿ ಹಳ್ಳಿಯ ಜನರ ದುಃಖ ದುಮ್ಮಾನಗಳು ಬರೀ ಸಿರಿವಂತರ ಆಡಂಬರದ ಜೀವನದ ಮಧ್ಯೆ ಕೇವಲ ಪ್ರದರ್ಶನದ (‘ಶೋಕೇಸ್’ ) ವಸ್ತುವಾಗಬಾರದು. ಇದು ಹೇಗಿದೆಯೆಂದರೆ ಆಧುನಿಕೋತ್ತರ ಭಾರತದಲ್ಲಿ ಗಾಂಧೀ ತತ್ವಗಳ ಕುರಿತ ಚಿಂತನೆ, ಕಾಳಜಿಗಳು, ಕಸದ ಬುಟ್ಟಿ ಸೇರಿದರೂ ಗಾಂಧೀ ಭಾವಚಿತ್ರವನ್ನು ಎಲ್ಲ ಕಡೆಗಳಲ್ಲಿ ಇಟ್ಟುಕೊಳ್ಳುವುದು ಒಂದು ಫ್ಯಾಷನ್ ಆಗಿರುವಂತಿದೆ. ಮಾರುಕಟ್ಟೆಯ ಕಡೆ ಮುಖ ಮಾಡಿರುವ ನಮ್ಮ ಯೋಚನೆಗಳಲ್ಲಿ, ಚಿಂತನಾ ವಿನ್ಯಾಸಗಳಲ್ಲಿ ಬದಲಾವಣೆಗಳು ಅಗತ್ಯ ಮತ್ತು ಅನಿವಾರ್ಯ ಕೂಡಾ. ಇದಕ್ಕಾಗಿ ನಮಗೆಲ್ಲ ಒಂದಿಷ್ಟು ಬಿಡುವಿನ ಅಗತ್ಯವಿದೆ.



ಇಂತಹ ಸವಾಲನ್ನು ನಿಭಾಯಿಸುವುದು ಹೇಗೆ ಎನ್ನುವುದಕ್ಕೆ ಸಲೀಸಾಗಿ ಉತ್ತರಿಸುವುದು ತ್ರಾಸದಾಯಕ ಕೆಲಸವೇ. ಇಂತಹ ಸಂದಿಗ್ಧಗಳು ಸಮಾಜದಲ್ಲಿ ಆಗಿಂದ್ದಾಗ್ಗೆ ಬರುತ್ತಲೇ ಇರುತ್ತದೆ ಮತ್ತು ಸಮಾಜದೊಳಗಿಂದಲೇ ಅದಕ್ಕೆ ಪರಿಹಾರವೂ ಹುಟ್ಟಿಕೊಳ್ಳುತ್ತದೆ ಎಂದು ಸಮಾಧಾನ ಪಡಬಹುದಾದರೂ ಅಂತಹ ಒಂದು ಪ್ರಯತ್ನ ಎಲ್ಲಿಂದಲಾದರೂ ಆರಂಭವಾಗಬೇಕಿದೆ. ವಿಶ್ವದೆಲ್ಲೆಡೆ ಪಸರಿಸಿರುವ ಕನ್ನಡದ ಮನಸ್ಸುಗಳು ಇಲ್ಲಿ ಸೇರಿರುವ ಈ ಹೊತ್ತು ಅದಕ್ಕೆ ಅತ್ಯಂತ ಸೂಕ್ತವಾದದ್ದೆ ಎಂದು ನನ್ನ ಅಭಿಪ್ರಾಯ.



ಜಾಗತೀಕರಣದ ಪರಿಣಾಮವಾಗಿ ತತ್ತರಿಸಿ ಹೋಗಿರುವ ಕರ್ನಾಟಕದ ಕುಶಲ ಕರ್ಮಿಗಳು, ರೈತರು ಮತ್ತು ಮಹಿಳೆಯರ ಬದುಕಿಗೆ ಒತ್ತಾಸೆಯಾಗಬಲ್ಲ (ದೂರಗಾಮಿ ಪರಿಣಾಮ ಬೀರಬಲ್ಲ) ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ. ಅವಕಾಶ ದೊರೆತರೆ ದುಡಿಯುವುದಕ್ಕೆ ಜನ ಹಿಂಜರಿಯುವುದಿಲ್ಲ. ಆದರೆ ಇಂತಹ ಅವಕಾಶಗಳು ಅವರ ಅರ್ಹತೆಯನ್ನು ಆಧರಿಸಿ ಸೃಷ್ಟಿಯಾಗಬೇಕು. ಬಹಳಷ್ಟು ಸಂದರ್ಭಗಳಲ್ಲಿ ಅವಕಾಶಗಳನ್ನು ಸೃಷ್ಟಿಸಿ ಅದಕ್ಕೆ ಅನುಗುಣವಾಗಿ ಜನರನ್ನು ಬದಲಾಯಿಸುವ ‘ಎತ್ತಿನ ಮುಂದೆ ಗಾಡಿ ಕಟ್ಟುವಂತಹ’ ನೀತಿಗಳನ್ನು ರೂಪಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬದಲಾವಣೆಯಾಗಬೇಕಾಗಿದೆ.



ಉದ್ಯಮರಂಗದಲ್ಲಿ ಯಶೋಗಾಥೆ ಬರೆಯುವ ಉದ್ಯಮ ಶೀಲರು ರೈತರ ಆತ್ಮಹತ್ಯೆಯನ್ನು ನಿಲ್ಲಿಸಬಲ್ಲ ನಿಟ್ಟಿನಲ್ಲಿ ಏನಾದರೂ ಮಾಡಬಹುದೇ?, ಮಿತವಾಗಿ ದೊರೆಯುವ ನೀರು, ಭೂಮಿಯನ್ನು ಜತನದಿಂದ ಉಪಯೋಗಿಸುವ ಕುರಿತಂತೆ ನಮ್ಮ ಆಲೋಚನೆಗಳೇನು? ನಿರಂತರ ಏರುತ್ತಿರುವ ವಿದ್ಯುತ್ತಿನ, ಇಂಧನ ಆಧಾರಿತ ವಸ್ತುಗಳ ಬೇಡಿಕೆಯನ್ನು ಹೇಗೆ ನಿಭಾಯಿಸುವುದು, ಈ ಬಗ್ಗೆ ಪರ್ಯಾಯ ಚಿಂತನೆಗಳ ಅವಶ್ಯಕತೆ ಇದೆ. ಈ ದಿಕ್ಕಿನಲ್ಲಿ ಚಿಂತಿಸಬಲ್ಲ ಕನ್ನಡ ಕ್ರಿಯಾಶೀಲ ಮನಸ್ಸುಗಳು, ಚಿಂತನಾಶೀಲ ಮನಸ್ಸುಗಳು ಕ್ರಿಯಾಶೀಲವಾಗಬೇಕಿದೆ. ದುಡ್ಡಿನಿಂದ ಸಂಪತ್ತಿನಿAದ ಇನ್ನೊಂದು ಭೂಮಿಯನ್ನು ಸೃಷ್ಟಿ ಮಾಡಲಾಗದು. ನಮ್ಮ ಯುವ ಜನಾಂಗವನ್ನು ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತಾ ಸೂಕ್ತ ಮಾರ್ಗದರ್ಶನ ಮಾಡಬೇಕಿದೆ, ನಾಯಕತ್ವ ನೀಡಬೇಕಿದೆ.



ದೇಶದಲ್ಲಿ ಇಂದು ಸೃಷ್ಟಿಯಾಗಿರುವ ಈ ವಿಕಲ್ಪದಿಂದ ಸಮಾಜವನ್ನು ಬಿಡುಗಡೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಜನಮಾನಸದಲ್ಲಿ ಮಡುಗಟ್ಟಿರುವ ದುಮ್ಮಾನಗಳಿಗೆ ದಿಕ್ಸೂಚಿಯೂ ಧ್ವನಿಯೂ ಆಗಬೇಕಾಗಿರುವುದು ಇಂದಿನ ಯುವ ಜನತೆ. ಯುವ ಜನರಲ್ಲಿರುವ ಅಗಾಧ ಕ್ರಿಯಾಶೀಲತೆಯನ್ನು ಇವತ್ತು ನಾವು ಉಪಯೋಗಿಸುತ್ತಲಿಲ್ಲ. ಅವರಲ್ಲಿರುವ ಅಪಾರ ಶಕ್ತಿಯನ್ನು ಮನೆಪಾಠ, ಅರ್ಥವಾಗದ, ಭಾವಶೂನ್ಯ ಬಾಯಿಪಾಠದ ಮೂಲಕ ಅಂಕಗಳಿಕೆಯ ತಾಲೀಮಿಗೆ ಮಾತ್ರ ಸೀಮಿತವಾಗಿರಿಸಿ ರಸ ಹಿಂಡಿದ ಕಬ್ಬಿನಂತೆ ಮಾಡಿ ಬಾಲ್ಯದ ಸವಿ ನೆನಪಿನ ಸಿಹಿ ಇಲ್ಲದೇ ಸಂಸಾರಕ್ಕೆ ಹಣ ಸುರಿಯುವ ಮಂತ್ರಗಳನ್ನಾಗಿಸುತ್ತಿದ್ದೇವೆ. ಇಲ್ಲಿ ಅತ್ಯಂತ ತುರ್ತಾದ ಬದಲಾವಣೆಗಳು ಬಹಳ ಅವಶ್ಯಕ. ಯುವ ಜನರಲ್ಲಿ ಯೋಚನೆ, ಚಿಂತನೆ, ಕನಸು ಕಾಣುವ ಪ್ರವೃತ್ತಿಯನ್ನು ಹೆಚ್ಚಿಸಬೇಕಿದೆ. ಇದಕ್ಕಾಗಿ ಉರುಹೊಡೆಯುವ ನಿಷ್ಕಿçಯ ಕ್ರಿಯೆ ಕಡಿಮೆಯಾಗಿ ಚಟುವಟಿಕೆ ಆಧಾರಿತ ಕಲಿಕೆಗೆ ಮಹತ್ವ ಬರಬೇಕಿದೆ. ಭಾಷೆ ಇನ್ನುವುದು ಭಾವದ ಅಭಿವ್ಯಕ್ತಿ. ಭಾವವೇ ಇಲ್ಲದೇ ಭಾಷೆಯನ್ನು ಕಲಿಯುವುದರಿಂದ ಭಾಷೆಗಾಗಲೀ, ಅದನ್ನು ಕಲಿತವನಿಗಾಗಲೀ ದೊಡ್ಡ ಪ್ರಯೋಜನವೇನೂ ಆಗಲಾರದು. ಈ ಕಾರಣದಿಂದ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಕನ್ನಡಲ್ಲಿ ಆಗಬೇಕು. ಇಂಗ್ಲೀಷನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಬಹುದೇ ಹೊರತು ಅದು ಮಾಧ್ಯಮವಾಗಿ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಹಾಗೆಯೇ ಕನ್ನಡವನ್ನು ಪ್ರೀತಿಯಿಂದ, ಕನ್ನಡ ಭಾಷೆಯ ಬಗ್ಗೆ ಪ್ರೀತಿಯಿದ್ದು, ಸೆಳೆತವಿರುವ ಅತ್ಯುತ್ತಮ ಕನ್ನಡ ಅದ್ಯಾಪಕರನ್ನು ಪ್ರಾಥಮಿಕ ಮತ್ತು ಮಾದ್ಯಮಿಕ ಶಾಲೆಗಳಿಗೆ ನೇಮಿಸುವುದು ಅಗತ್ಯ. ಇಂತಹ ಅದ್ಯಾಪಕರು ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿಯೂ ತಾಯಿ ಭುವನೇಶ್ವರಿಯ ಮೂರ್ತಿಯನ್ನು ಕಡೆದು ನಿಲ್ಲಿಸಿದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೇನಿದೆ?



ಡಾ| ಉದಯ ಕುಮಾರ್ ಇರ್ವತ್ತೂರು


ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇರ್ವತ್ತೂರಿನವರಾದ ಡಾ| ಉದಯ ಕುಮಾರ್ ಇರ್ವತ್ತೂರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಹ ಪ್ರಾದ್ಯಾಪಕರು ಹಾಗೂ ಎಂ.ಬಿ.ಎ. ವಿಭಾಗದ ಸಂಯೋಜಕರು. ಕತೆ, ಕವನ, ವಿಚಾರ ಲೇಖನಗಳ ಮೂಲಕ ಕನ್ನಡದ ವಾಙ್ಮಯ ಲೋಕಕ್ಕೆ ಪ್ರವೇಶ ಮಾಡಿದ ಇರ್ವತ್ತೂರು ಕನ್ನಡದ ಓದುಗರಿಗೆ ಪರಿಚಿತರು. ‘ಮಹಿಳಾ ಉದ್ಯಮಶೀಲತೆ’ ಯಲ್ಲಿ ಸಂಶೋಧನೆಯ ಅನಂತರ ಅಭಿವೃದ್ಧಿ ಅಧ್ಯಯನವನ್ನು ಆಸಕ್ತಿಯ ಕ್ಷೇತ್ರವನ್ನಾಗಿ ಆರಿಸಿಕೊಂಡಿದ್ದಾರೆ. ಮಹಿಳಾ ಅಭಿವೃದ್ಧಿಯ ಬಗ್ಗೆ ವಿಶೇಷ ಒಲವಿನಿಂದ ಕೈಗೊಂಡ ಅಧ್ಯಯನಗಳು ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಮಂಡನೆಯಾಗಿದ್ದು, ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಕೆನಡಾ, ದಕ್ಷಿಣ ಆಪ್ರಿಕಾ, ಬ್ಯಾಂಕಾಕ್, ಸಿಂಗಾಪುರ, ನೆದರ್‌ಲ್ಯಾಂಡ್ ಮುಂತಾದೆಡೆಗಳಲ್ಲಿ ನಡೆದ ಅಂತರಾಷ್ಟಿçÃಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದು, ಅಕಾಡೆಮಿಕ್ ವಲಯದಲ್ಲಿ ಸಕ್ರಿಯವಾಗಿರುವ ಅಧ್ಯಾಪಕ. ಕೆಲ ಸಮಯದ ಹಿಂದೆ ಕಾಲೇಜು ಅಧ್ಯಾಪಕರ ಸಂಘಟನೆ ‘ಅಮುಕ್ತ್’ನ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್‌ನ ಸದಸ್ಯರಾಗಿಯೂ ಕೆಲಸ ಮಾಡಿರುತ್ತಾರೆ. ಪ್ರಸ್ತುತ ಕೆಲವೊಂದು ಸ್ವಾಯತ್ತ ಕಾಲೇಜುಗಳ ಶೈಕ್ಷಣಿಕ ಮಂಡಳಿಯಲ್ಲಿ ವಿಶ್ವವಿದ್ಯಾನಿಲಯದ ನಾಮನಿರ್ದೇಶಿತ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ‘ಅಭಿವೃದ್ಧಿ – ವಾಸ್ತವ ಮತ್ತು ವಿಕಲ್ಪ’, ಉಡುಪಿ ಜಿಲ್ಲೆ ಆಧುನೀಕರಣ, ಅಭಿವೃದ್ಧಿ ಮತ್ತು ಕೈಗಾರಿಕೆಗಳು, ಬೆಂಗಳೂರಿನ ದಾಮಿನಿ ಪ್ರಕಾಶನದ ಮೂಲಕ ಬೆಳಕು ಕಂಡಿವೆ. ಅಲ್ಲದೆ ಕನ್ನಡ ವಿಶ್ವವಿದ್ಯಾನಿಲಯ ಇವರ ‘ವಾಣಿಜ್ಯ ಶಾಸ್ತç’ ಕೃತಿಯನ್ನು ಹೊರ ತಂದಿರುತ್ತದೆ.



ಸAಪರ್ಕ ವಿಳಾಸ:


ಡಾ| ಉದಯ ಕುಮಾರ್ ಇರ್ವತ್ತೂರು


ಸಹ ಪ್ರಾದ್ಯಾಪಕರು ಹಾಗೂ ಎಂ.ಬಿ.ಎ. ವಿಭಾಗದ ಸಂಯೋಜಕರು.


ವಿಶ್ವವಿದ್ಯಾನಿಲಯ ಕಾಲೇಜು


ಹಂಪನಕಟ್ಟೆ, ಮಂಗಳೂರು, ದ.ಕ. - ೧


ದೂರವಾಣಿ: ೦೮೨೪-೨೨೧೪೦೨೯, ೯೪೪೯೭೭೨೯೯೬

Comments

Popular posts from this blog

ಸಾಮಾಜಿಕ ಉದ್ಯಮಶೀಲತೆ

ಭಾರತೀಯ ಆರ್ಥಿಕ ವ್ಯವಸ್ಥೆ: ವಿನ್ಯಾಸ ಮತ್ತು ವಿಮರ್ಶೆ

೧೫೦ನೇ ವರ್ಷಾಚರಣೆಯ ನೆನಪಿನ ಕಾರ್ಯಕ್ರಮಗಳ ಪಕ್ಷಿನೋಟ