ಮನಸು ಪಕ್ವ ಆಗುವ ಗಳಿಗೆ
- ಸಮ್ಮೇದ ಶಿಖರಜೀ ದರ್ಶನ ಅನುಭವ
- ಇತ್ತೀಚೆಗೆ ಜಾರ್ಖಂಡ್ ರಾಜ್ಯದ ರಾಂಚಿಗೆ ಹೋಗಬೇಕಾದ ಪ್ರಸಂಗ ಒದಗಿ ಬಂತು. ಅಲ್ಲಿಂದ ಸುಮಾರು ೨೦೦ ಕಿ.ಮೀ. ದೂರದಲ್ಲಿರುವ ಜೈನ ಧರ್ಮಾನುಯಾಯಿಗಳ ಪುಣ್ಯ ಭೂಮಿ “ಸಮ್ಮೇದ ಶಿಖರಜೀ” ಗೇ ಹೋಗಿಯೇ ಬರಬೇಕು ಎನ್ನುವ ಸಂಕಲ್ಪ ಮನಸ್ಸಿನಲ್ಲಿ ಮೂಡಿತು. ಜೀವನದಲ್ಲಿ ಒಮ್ಮೆ ‘ಸಮ್ಮೇದ ಶಿಖರಜೀ’ ಯಾತ್ರೆ ಮಾಡಿದರೀ ಬದುಕು ಸಾರ್ಥಕ ಎನ್ನುವ ಮಾತು ಜಿನ ಧಮೀಯರಲ್ಲಿ ಜನಜನಿತ. ತೀರ್ಥ ಯಾತ್ರೆ ನೀಡಬಹುದಾದ ಅನುಭವಕ್ಕಾಗಿ ನನ್ನ ಮನಸ್ಸು ಹಾತೊರೆಯತೊಡಗಿತು. ಮಂಗಳೂರಿನಿAದ ಕೊಂಕಣ ರೈಲ್ವೇ ಮೂಲಕ ಮುಂಬೈಗೆ, ಮುಂಬೈಯಿAದ ವಿಮಾನದಲ್ಲಿ ಪಾಟ್ನಾದ ಮೂಲಕ ರಾಂಚಿಗೆ ತಲುಪಿದೆ. ಸಂಜೆ ಕಳೆದು ಮರು ದಿವಸ ಮುಂಜಾನೆ ಆರು ಗಂಟೆಗೆ ರೈಲಿನ ಮೂಲಕ ರಾಂಚಿಯಿAದ ಪಾರಸ್ನಾಥ್ ರೈಲು ನಿಲ್ದಾಣ ತಲುಪಿದಾಗ ಬೆಳಗ್ಗಿನ ೧೧ ಗಂಟೆ. ರೈಲು ನಿಲ್ದಾಣದಿಂದ ಟ್ಯಾಕ್ಸೀ ಮೂಲಕ ಶಿಖರಜೀ ಪರ್ವತ ಶ್ರೇಣಿಯ ಬುಡದಲ್ಲಿರುವ ಮಧುವನ ಪಟ್ಟಣ ಸೇರಿದಾಗ ಮಧ್ಯಾಹ್ನದ ೧ ಗಂಟೆ.
- ವಿಶ್ವದಲ್ಲೆಡೆಯಿAದ ಶಿಖರಜೀ ದರ್ಶನ ಮಾಡಲು ಬರುವ ಯಾತ್ರಿಕರಿಗೆ ಇಲ್ಲಿ ಅನುಕೂಲತೆಗಳು ಚೆನ್ನಾಗಿಯೇ ಇವೆ. ಉತ್ತರ ಪ್ರದೇಶ ಪ್ರಕಾಶ ಭವನ ಯಾತ್ರೀ ಗ್ರಹದ ಕೊಠಡಿಗಳು ನಾವು ಕೊಡುವ ಹಣಕ್ಕೆ ಮೀರಿದ ಸೌಕರ್ಯ ಹೊಂದಿದೆ ಎಂದರೆ ತಪ್ಪಲ್ಲ. ಮೊದಲ ದಿನ ಮಧುವನದಲ್ಲಿ ಓಡಾಡಿದ ನನಗೆ ಮನವರಿಕೆಯಾದದ್ದು ಒಂದೇ ವಿಷಯ “ಇಷ್ಟು ದೂರದ ತೀರ್ಥ ಕ್ಷೇತ್ರಕ್ಕೆ ಏಕಾಂಗಿಯಾಗಿ ಬಂದವನು ನಾನೊಬ್ಬನೇ ಎನ್ನುವುದು”.
- ಶಿಖರಜೀ ಎನ್ನುವುದು ಬೆಟ್ಟದ ಮೇಲಿರುವ ಮೇರು ಶಿಖರಗಳು. ಬೆಟ್ಟವೇರಬೇಕಾದರೆ ಸುದ್ಮಾರು ೯ ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕು. ಸುಮಾರು ನಾಲ್ಕರಿಂದ ಐದು ತಾಸು ನಡೆದೇ ಹೋಗಬೇಕು. ಶಿಖರವೇರಿದ ಮೇಲೆ ಅಲ್ಲಿ ಸುಮಾರು ೯ ರಿಂದ ೧೦ ಕಿ.ಮೀ. ವ್ಯಾಪ್ತಿಯೊಳಗೆ ೨೦ ದರ್ಶನ ಮಾಡ ಬೇಕಿರುವ ಇಪ್ಪತ್ತು ಸ್ಥಳಗಳಿವೆ. ಕೊನೆಗೆ ಮತ್ತೆ ಬೆಟ್ಟ ಇಳಿದುಕೊಂಡು ಬರಬೇಕು. ಹಾಗಾಗಿ ಒಟ್ಟಿಗೆ ಸುಮಾರು ೩೦ ಕಿ.ಮೀ. ದೂರವನ್ನು ಕ್ರಮಿಸಲು ೧೦ ರಿಂದ ೧೨ ಗಂಟೆಗಳು ಬೇಕು. ಇದು ಕಾಡಿನೊಳಗಿನ ದಾರಿ, ಅಲ್ಲಲ್ಲಿ ಮೆಟ್ಟಲುಗಳು ಕೆಲವೊಂದು ಕಡೆ ಕಾಲು ದಾರಿ ಬಂಡೆಗಳ ಮೇಲಿಂದ ಸಾಗುತ್ತದೆ. ಈ ದುರ್ಗಮ ದಾರಿ ಮೇಲೆರಿದ ಹಾಗೇ ಯಾತ್ರಿಕರ ಮನೋಬಲವನ್ನೂ ಪರೀಕ್ಷಿಸುವುದಿದೆ. ಸ್ಥಳೀಯನೊಬ್ಬನಲ್ಲಿ ವಿಚಾರಿಸಿದಾಗ ಮುಂಜಾನೆ ಎರಡು ಗಂಟೆಯಿAದಲೇ ಜನ ಬೆಟ್ಟ ಹತ್ತಲು ಆರಂಭಿಸುತ್ತಾರೆ. ದಾರಿಯಲ್ಲಿ ಬೇಕಾದಷ್ಟು ಜನಸಿಕ್ತಾರೆ ಕೋಯಿ ತಕಲೀಫ್ ನಹೀಂ ಎಂದ. ಆಯಾಸ ಪರಿಹರಿಸಲು ನೀರು ಮತ್ತು ಅಗತ್ಯಕ್ಕಾಗಿ ಹಣ್ಣು ಹಂಪಲು ತೆಗೆದುಕೊಂಡರೆ ಒಳ್ಳೆಯದು ಎನ್ನುವ ಸಲಹೆಯನ್ನೂ ನೀಡಿದ. ಸಲಹೆ ಸಿಕ್ಕಿದ ಮೇಲೆ ಸುಮ್ಮನಿರುವುದು ಹೇಗೆ ಎಂದು ನಾನು ಅಂತೆಯೇ ಸಿದ್ಧತೆ ಮಾಡಿಕೊಂಡೆ. ಬೆಟ್ಟ ಹತ್ತಲಿಕ್ಕೆ ಬೇಕೇ ಬೇಕಾಗಿರುವ ಬೆತ್ತದ ಕೊಲೊಂದನ್ನು ನೀಡಿ ಆ ಪುಣ್ಯಾತ್ಮ ನನಗೆ ಶುಭ ಹಾರೈಸಿದ. ಎರಡು ಗಂಟೆಗೆ ಎದ್ದು ಸ್ನಾನ ಮಾಡಿ ಹೊರಡುವ ಎಂದು ಮಲಗಿದರೆ ನಿದ್ದೆಯೇ ಇಲ್ಲ. ಜೊತೆಗೆ ೮ ಡಿಗ್ರಿಯಷ್ಟರ ಉಷ್ಣಾಂಶದ ಬಿಸಿ ಬೇರೆ (?).
- ಮುಂಜಾನೆ ಎರಡೂವರೆಗೆ ಎದ್ದು ಹೊರಟರೆ ರಸ್ತೆ ಎಲ್ಲ ನಿರ್ಜನ ! ಮಧುವನ ಪೇಟೆಯಿಂದ ಬೆಟ್ಟ ಹತ್ತುವ ದಾರಿ ಬುಡದಲ್ಲಿ ಒಂದಿಷ್ಟು ದೂರ ರಸ್ತೆ ದೀಪಗಳಿದ್ದರೆ ಮುಂದೆ ನಡೆದಂತೆಲ್ಲ ಕತ್ತಲೆ. ಬೀಸುವ ಚಳಿಗಾಳಿಗೆ ಕೈಕಾಲಿನ ಬೆರಳುಗಳು ಮರಗಟ್ಟಿದ ಅನುಭವ. ದಾರಿ ಸಾಗಿದಂತೆಲ್ಲ ದಟ್ಟವಾದ ಕತ್ತಲೆ ಮೊಬೈಲ್ ದೀಪದ ಬೆಳಕೂ ಕ್ಷೀಣಿಸುತ್ತಾ ಬಂದAತೆ ಗಾಬರಿ ಸಾಂದ್ರವಾಗುತ್ತಾ ಹೋಯಿತು. ಕಡಿದಾದ, ಕಿರಿದಾದ ದಾರಿಗೆ ಹಾಕಿದ ಸಿಮೆಂಟಿನ ಬಿಳಿ ಬಿಟ್ಟರೆ ಕತ್ತಲಲ್ಲಿ ಪ್ರತಿಫಲಿಸುವುದು, ನಮ್ಮ ಕಣ್ಣೊಳಗಿನ ಬೆಳಕು ಮಾತ್ರ. ದಟ್ಟ ಅಡವಿ, ಗಾಢ ಅಂಧಕಾರ, ಕಂಡು ಕೇಳರಿಯದ ಊರು, ಕಾಲುಗಳು ದೇಹದ ಭಾರಕ್ಕೆ ಸುಸ್ತಾಗುತ್ತಿದ್ದುವು. ಒಂದಷ್ಟು ದೂರ ಸಾಗಿದ ಮೇಲೆ ದಾರಿ ಬದಿಯಲ್ಲಿ ವಿಶ್ರಾಂತಿ. ಹಿಮಗಟ್ಟ ತೊಡಗಿದ ಬಾಟಲಿಯಿಂದ ನೀರು ಕುಡಿದು ಆಯಾಸ ಪರಿಹಾರ. ಕಳ್ಳಕಾಕರ ಭಯವಿದೆ ಎಂದು ಯಾರೋ ಹೇಳಿದ್ದು ನೆನಪಾಗಿ ಭಯ ಇನ್ನಷ್ಟು ಹೆಚ್ಚಾಯ್ತು. ಡಿಜಿಟಲ್ ಕ್ಯಾಮೆರಾ, ಇದ್ದ ಎಲ್ಲಾ ಹಣ, ಮೊಬೈಲ್ ಎಲ್ಲವೂ ನನ್ನ ಜೊತೆಯೇ ಇದೆ. ಆಗಾಗ್ಗೆ ಕಾಡೊಳಗಿನ ನೀರನ ಮೌನವನ್ನು ಸವರಿಕೊಂಡು ಹೋಗುವ ಶೀತಗಳಿಗೆ ಆಲಗುವ ಮರಗಿಡಗಳು, ಕ್ಷಣ ಕ್ಷಣಕ್ಕೂ ದೂರ ದೂರಕ್ಕೆ ಜಾರುತ್ತಿರುವ ಊರು. ಒಂದರೆಕ್ಷಣ ಸಾವಿನ ನಂತರ ವೈತರಣೆಯನ್ನು ದಾಟಿ ನಡೆಯುವಂತಹ ಸಾವಿನ ಜೊತೆ ಹೆಜ್ಜೆ ಹಾಕುತ್ತಿರುವ ಅನುಭವ. ಭ್ರಮೆ ಮತ್ತು ವಾಸ್ತವಗಳ ನಡುವಿನ ಅಂತರ ಕ್ಷೀಣಿಸುತ್ತಾ ಬಂದ ಅನುಭವ. ಹಾಗಂತ ಎಲ್ಲಿಯವರೆಗೆ ಭಯಪಡುವುದು ಒಂದು ಹಂತದಲ್ಲಿ ಮನಸ್ಸು.ಗಟ್ಟಿ ಮಾಡಿ ಕೈಯಲ್ಲಿದ್ದ ಬೆತ್ತದ ಕೋಲನ್ನೇ ಆಧಾರ ಮಾಡಿಕೊಂಡು ಬಂದದ್ದನ್ನು ಎದುರಿಸಿ ಮುನ್ನಡೆಯುವ ತೀರ್ಮಾನಕ್ಕೆ ಬಂದು ಹೆಜ್ಜೆ ಹಾಕಲಾರಂಭಿಸಿದೆ. ಇಷ್ಟೊಂದು ದೂರವನ್ನು ಕ್ರಮಿಸಲು ಆಗಬಹುದೇ ಎನ್ನುವ ಅನುಮಾನ ಬೇರೆ ಆಗಾಗ ತಲೆಯೆತ್ತುತ್ತಲೇ ಇತ್ತು. ಆದರೆ ಇಟ್ಟ ಹೆಜ್ಜೆ ಹಿಂದಕ್ಕೆ ಇಡುವ ಯೋಚನೆಗೂ ಅವಕಾಶವೇ ಇಲ್ಲ.
- ಮುಂಜಾನೆಯ ನಾಲ್ಕು ಗಂಟೆಯಾಗುವಾಗ ಬೆಟ್ಟದ ಬುಡದಲ್ಲಿ ದೂರದಲ್ಲಿ ಟಾರ್ಚು ಬೆಳಕು ಕಂಡಾಗ ಆದ ಖುಷಿಗೆ ಪಾರವೇ ಇಲ್ಲ. ಪ್ರಾಯಶ: ಮನುಷ್ಯನಿಗೆ ತೀರ್ಥಯಾತ್ರೆ ಕೊಡುವ ಇಂತಹ ಅನುಭವದಿಂದಲೇ ನಮ್ಮ ಯೋಚನಾ ಕ್ರಮ ಬದಲಾಗುತ್ತದೆ ಎನಿಸಿತು. ನಾಲ್ಕೂವರೆ ಐದು ಗಂಟೆಗೆ ಕೆಲವೊಂದು ಯಾತ್ರಿಕರು ನನ್ನನ್ನು ದಾಟಿ ಮುನ್ನಡೆದರು. ಅಂತೂ ಇಂತೂ ಬೆಳಕು ಹರಿಯುವ ಹೊತ್ತಿಗೆ ಶಿಖರದ ತುದಿ ತಲುಪಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯ್ತು. ಮುಂಜಾನೆಯ ಸೂರ್ಯ ರಶ್ಮಿ ಶಿಖರಜೀಯ ಗಿರಿ ಶಿಖರಗಳ ಮೇಲೆ ಹೊಂಬಿಸಿಲಿನ ಅಭಿಷೇಕ ಮಾಡುವ ಅಪೂರ್ವ ದ್ರಶ್ಯ ನೋಡಿದಾಗ ಎಲ್ಲ ಆಯಾಸ ಮರೆಯಾಯ್ತು. ಸಮುದ್ರ ಮಟ್ಟದಿಂದ ೪೪೩೦ ಅಡಿಗಳ ಎತ್ತರದಲ್ಲಿರುವ ಸಮ್ಮೇದ ಶಿಖರಜೀಯಲ್ಲಿ ವರ್ತಮಾನ ಕಾಲದ ಇಪ್ಪತ್ತ ನಾಲ್ಕು ತೀರ್ಥಂಕರ ಪೈಕಿ ಇಪ್ಪತ್ತು ಮಂದಿ ತಪಸ್ಸು ಮಾಡಿ ಮೋಕ್ಷ ಪಡೆದು (ಪವಿತ್ರ ಭೂಮಿ) ಮುಕ್ತಿ ಹೊಂದಿದ್ದಾರೆ. ಶ್ರೀ ಆದಿನಾಥ ಸ್ವಾಮಿ, ಶ್ರೀ ವಾಸುಪೂಜ್ಯ, ಶ್ರೀ ನೇಮಿನಾಥ, ಮತ್ತು ಕೊನೆಯ ತೀರ್ಥಂಕರ ಶ್ರೀ ಮಹಾವೀರ ಸ್ವಾಮಿ ಕ್ರಮವಾಗಿ ಕೈಲಾಸ ಪರ್ವತ, ಚಂಪಾಪುರಿ, ಗಿರಿನಾರ್ ಮತ್ತು ಪಾವಾಪುರಿಯಲ್ಲಿ ಮೋಕ್ಷ ಪಡೆದಿದ್ದಾರೆ ಎನ್ನಲಾಗಿದೆ.
- ಸಮ್ಮೇದ ಶಿಖರಜೀಯಲ್ಲಿ ಇಪ್ಪತ್ತು ತೀರ್ಥಂಕರರು ತಪಸ್ಸು ಮಾಡಿದ ಜಾಗಗಳಲ್ಲಿ ಶಿಲೆಯ ಮೇಲೆ ಅವರ ಪಾದಗಳನ್ನು ಕೆತ್ತಲಾಗಿದೆ. ಅದರ ಸುತ್ತಲೂ ಸಣ್ಣ ಮಂಟಪಗಳನ್ನು ನಿರ್ಮಿಸಲಾಗಿದೆ. ಅಲ್ಲಿ ಯಾತ್ರಿಕರು ತೀರ್ಥಂಕರರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇಪ್ಪತ್ತು ತೀರ್ಥಂಕರರಲ್ಲದೆ ಗಣಧರರು, ಅವರ ಅನುಯಾಯಿಗಳು ತಪ್ಪಸ್ಸು ಮಾಡಿದ ಜಾಗಗಳಿವೆ. ಸುಮಾರು ೧೦ ಕಿ.ಮೀ. ಅಂತರದಲ್ಲಿ ಪಸರಿಸಿಕೊಂಡಿರುವ ತಪಸ್ಸು ಮಾಡಿದ ಜಾಗಗಳ ಮಧ್ಯ ಭಾಗದಲ್ಲಿ ಜಲಮಂದಿರವಿದೆ. ಇಲ್ಲಿ ಶ್ವೆತಾಂಬರ ಜೈನರು ಪ್ರತಿಷ್ಟಾಪಿಸಿದ ಮೂರ್ತಿಗಳಿವೆ. ಎಲ್ಲ ಮಂಟಪಗಳನ್ನು ಸಂದರ್ಶಿಸಿ ಕೊನೆಗೆ ಸಿಗುವುದ್ಸೇ ಇಪ್ಪತ್ತ ಮೂರನೆಯ ತೀರ್ಥಂಕರ ಶ್ರೀ ಪಾರ್ಶ್ವನಾಥ ಸ್ವಾಮಿ ಮೋಕ್ಷ ಪಡೆದ ತಾಣ. ಇಲ್ಲಿ ಮಾತ್ರ ಬಸದಿ ಇದೆ. ಇಡೀ ಪ್ರದೇಶದಲ್ಲಿ ಎಲ್ಲಿಯೂ ಭಗವಂತ ಮತ್ತು ಭಕ್ತರ ನಡುವೆ ಮದ್ಯವರ್ತಿಗಳಿಲ್ಲ. ಸುಧೀರ್ಘ ಪಯಣದ ನಂತರ ಮನಸ್ಸಿನಲ್ಲಿ ಮತ್ತೆ ಮತ್ತೆ ಬರುವ ಭಾವನೆ, ಇ೦ತಹ ಜಾಗಕ್ಕೆ ಬರುವ ಅವಕಾಶ ದೊರೆಯಿತಲ್ಲಾ, ಇದೇ ದೊಡ್ಡ ಸ೦ಪತ್ತು ಎನ್ನುವುದು. ದಾರಿ ಮಧ್ಯೆ ಅಶಕ್ತರನ್ನು ಸುಸ್ತಾಗಿ ಹೋದವರನ್ನು ಹೊತ್ತುಕೊಂಡು ಹೋಗುವ ಡೋಲಿ ವಾಲಾಗಳು ಕಾಣಸಿಗುತ್ತಾರೆ. ಈ ಸೇವೆಗೆ ಸಿಗುವ ಆದಾಯ ಇಲ್ಲಿಯ ಬಡ ಕಾರ್ಮಿಕರಿಗೆ ಆದಾಯದ ಮೂಲವು ಹೌದು. ಅವರಿಂದ ದೀನ ಒತ್ತಾಯದಿ೦ದ ಪಾರಾಗೂವುದೂ ಸಂಕಟದ ಸಂಗತಿ.
- ದರ್ಶನ ಪೂರ್ಣಗೊಳಿಸಿ ಬೆಟ್ಟವಿಳಿಯ ತೊಡಗಿದ ನಂತರ ಮಧುವನ ತಲುಪಲು ನಾಲ್ಕು ಗಂಟೆಗಳೇ ಬೇಕು ದಾರಿಯಲ್ಲಿ ಗಂಧರ್ವ ನಾಲಾ ಎನ್ನುವ ಸ್ಥಳದಲ್ಲಿ ಯಾತ್ರಿಕರಿಗೆ ತಿನ್ನಲು ಬೂಂದಿ ಕಾಳು ಮತ್ತು ಚಹಾ ನೀಡುವ ವ್ಯವಸ್ಥೆಯಿದೆ. ಹಿಂದಿನ ದಿನ ರಾತ್ರಿ ಕತ್ತಲಲ್ಲಿ ಇದು ಯಾವುದೂ ನನಗೇ ಗೊತ್ತೇ ಆಗಲಿಲ್ಲ. ಮರಳಿ ಮಧುವನಕ್ಕೆ ಬಂದಾಗ ದೇಹಕ್ಕೆ ನಿರಂತರ ಹನ್ನೊಂದು ಗಂಟೆಗಳ ತ್ರಾಸದಾಯಕ ನಡೆಗೆಯ ನೋವಾದರೂ ಮನಸ್ಸಿಗೆ ಶಿಖಜೀ ದರ್ಶನ ಮಾಡಿದ ಸಾರ್ಥಕ ಭಾವ ಮುದ ನೀಡುತ್ತಿತ್ತು. ಸಂಜೆಯ ಹೊತ್ತಿಗೆ ಬಸವಳಿದ ಕೈಕಾಲುಗಳಿಗೆ ಎಣ್ಣೆ ತಿಕ್ಕಿ ಮಸಾಜ್ ಮಾಡಿಸಿಕೊಳ್ಳಲೇ ಬೇಕಾಯಿತು. ಸಮ್ಮೇದ ಶಿಖರಜೀ ದರ್ಶನದ ಅನುಭವ ಬದುಕಿನಲ್ಲಿ ಹೊಸ ಹುರುಪು ಹೊಸ ಚೈತನ್ಯವನ್ನು ನೀಡಿರುವುದಂತೂ ಸತ್ಯ.
- ಡಾ. ಉದಯ ಕುಮಾರ ಇರ್ವತ್ತೂರು
Comments
Post a Comment
Please comment on the subjects posted on the site